ಪ್ರತಿಭಟನೆ ದಮನಿಸಲು ನಿರಾಕರಿಸಿದ ಪೊಲೀಸರು ಸೇರಿದಂತೆ ಮ್ಯಾನ್ಮಾರ್ ಪ್ರಜೆಗಳು ಭಾರತಕ್ಕೆ ಪಲಾಯನ

Update: 2021-03-05 16:47 GMT

ಐಝ್ವಲ್(ಮಿಝೋರಾಮ್),ಮಾ.5: ಮ್ಯಾನ್ಮಾರ್‌ನಲ್ಲಿ ಪ್ರಕ್ಷುಬ್ಧ ಸ್ಥಿತಿಯುಂಟಾಗಿರುವ ಹಿನ್ನೆಲೆಯಲ್ಲಿ ಹಲವಾರು ಜನರು ಭಾರತಕ್ಕೆ ಪರಾರಿಯಾಗುತ್ತಿದ್ದು, ಇವರಲ್ಲಿ ಆ ದೇಶದಲ್ಲಿ ಮಿಲಿಟರಿ ಬಂಡಾಯದ ವಿರುದ್ಧ ಪ್ರತಿಭಟನಾಕಾರರ ಮೇಲೆ ಹಿಂಸಾತ್ಮಕ ದಾಳಿಗಳಲ್ಲಿ ಭಾಗಿಯಾಗಲು ನಿರಾಕರಿಸಿರುವ ಕೆಲವು ಪೊಲೀಸರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮ್ಯಾನ್ಮಾರ್‌ನಲ್ಲಿ ಸೇನೆಯು ಬಂಡಾಯವೆದ್ದು ಚುನಾಯಿತ ನಾಯಕಿ ಆಂಗ್ ಸಾನ್ ಸೂ ಕಿ ಅವರನ್ನು ಪದಚ್ಯುತಗೊಳಿಸಿದ್ದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹಿಂಸಾತ್ಮಕವಾಗಿ ದಮನಿಸಲಾಗುತ್ತಿದೆ.

ಬುಧವಾರ ಮ್ಯಾನ್ಮಾರ್‌ನಲ್ಲಿ ಕನಿಷ್ಠ 38 ಪ್ರತಿಭಟನಾಕಾರರು ಕೊಲ್ಲಲ್ಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯು ತಿಳಿಸಿದೆ. ಅದೇ ದಿನ ಒಂಭತ್ತು ಮ್ಯಾನ್ಮಾರ್ ಪ್ರಜೆಗಳು ಭಾರತದ ಗಡಿಯನ್ನು ದಾಟಿ ಮಿಝೋರಾಮ್ ರಾಜ್ಯವನ್ನು ಪ್ರವೇಶಿಸಿದ್ದು,ಈ ಪೈಕಿ ಮೂವರು ಪೊಲೀಸರೂ ಸೇರಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರದಿಂದ ಕನಿಷ್ಠ 20 ಜನರು ಭಾರತವನ್ನು ಪ್ರವೇಶಿಸಿದ್ದು,ಚಂಫಾಯಿ ಮತ್ತು ಸೆರ್ಛಿಪ್ ಜಿಲ್ಲೆಗಳಲ್ಲಿ ಕನಿಷ್ಠ 50 ಮ್ಯಾನ್ಮಾರ್ ಪ್ರಜೆಗಳಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಅವರ ಗುರುತು ವಿವರಗಳು ಮತ್ತು ಮ್ಯಾನ್ಮಾರ್‌ನಿಂದ ಪರಾರಿಯಾಗಲು ಕಾರಣಗಳನ್ನು ನಮೂದಿಸಿ ವರದಿಯನ್ನು ರಾಜ್ಯ ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದರು.

ಮ್ಯಾನ್ಮಾರ್ ಪ್ರಜೆಗಳು ಗಡಿಯನ್ನು ದಾಟುತ್ತಿರುವುದು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಸ್ಥಳಿಯರಿಗೆ ತಿಳಿಸಲಾಗಿದೆ ಎಂದು ಚಂಫಾಯಿ ಜಿಲ್ಲಾಧಿಕಾರಿ ಮಾರಿಯಾ ಸಿ ಟಿ ಝುವಾಲಿ ತಿಳಿಸಿದರು.

‘ಭಾರತವನ್ನು ಪ್ರವೇಶಿಸುತ್ತಿರುವವರ ಜೀವಕ್ಕೆ ಮ್ಯಾನ್ಮಾರ್‌ನಲ್ಲಿ ನಿಜಕ್ಕೂ ಬೆದರಿಕೆಯಿದೆಯೇ ಎನ್ನುವುದನ್ನು ಕಂಡುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಕೇಂದ್ರ ಸರಕಾರದ ಅಭಿಪ್ರಾಯವನ್ನು ಆಧರಿಸಿ ನಾವು ಈ ಜನರ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳುತ್ತೇವೆ. ಅವರನ್ನು ನಿರಾಶ್ರಿತನ್ನಾಗಿ ಸ್ವೀಕರಿಸಲು ಅನುಮತಿ ದೊರೆಯದಿದ್ದರೆ ಮ್ಯಾನ್ಮಾರ್‌ಗೆ ಗಡಿಪಾರು ಮಾಡಲಾಗುವುದು ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News