×
Ad

ಕೊರೋನ ವೈರಸ್ ಸಾಂಕ್ರಾಮಿಕದ ಉಗಮ: ಮಧ್ಯಂತರ ವರದಿ ರದ್ದುಪಡಿಸಲು ಡಬ್ಲ್ಯುಎಚ್‌ಒ ತಂಡ ನಿರ್ಧಾರ

Update: 2021-03-05 22:30 IST

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 5: ಕೊರೋನ ವೈರಸ್ ಸಾಂಕ್ರಾಮಿಕದ ಮೂಲವನ್ನು ಪತ್ತೆಹಚ್ಚುವುದಕ್ಕಾಗಿ ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರ ತಂಡವು, ತನ್ನ ಮಧ್ಯಂತರ ವರದಿಯನ್ನು ರದ್ದುಪಡಿಸಲು ನಿರ್ಧರಿಸಿದೆ.

ತನಿಖೆಯ ಬಗ್ಗೆ ಚೀನಾ ಮತ್ತು ಅಮೆರಿಕದ ನಡುವೆ ಏರ್ಪಟ್ಟಿರುವ ಉದ್ವಿಗ್ನತೆ ಹಾಗೂ ಹೊಸ ತನಿಖೆ ನಡೆಸುವಂತೆ ಅಂತರ್‌ರಾಷ್ಟ್ರೀಯ ವಿಜ್ಞಾನಿಗಳ ಗುಂಪೊಂದು ಮಾಡಿರುವ ಮನವಿಯ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರ ತಂಡವು ಈ ಕ್ರಮ ತೆಗೆದುಕೊಂಡಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಗುರುವಾರ ವರದಿ ಮಾಡಿದೆ.

‘‘ಪೂರ್ಣ ವರದಿಯು ಕೆಲವೇ ವಾರಗಳಲ್ಲಿ ಹೊರಬರುವ ನಿರೀಕ್ಷೆಯಿದೆ’’ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ತಾರಿಕ್ ಜಸರೆವಿಚ್ ಇಮೇಲ್ ಮೂಲಕ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ವುಹಾನ್ ನಗರದಲ್ಲಿ ತನಿಖೆ ನಡೆಸಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡವು ವರದಿಯನ್ನು ಯಾಕೆ ವಿಳಂಬಿಸುತ್ತಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಮೊದಲ ಕೊರೋನ ವೈರಸ್ ಸಾಂಕ್ರಾಮಿಕ ಪ್ರಕರಣವು ಚೀನಾದ ವುಹಾನ್ ನಗರದಲ್ಲಿ 2019ರ ಕೊನೆಯಲ್ಲಿ ವರದಿಯಾಗಿತ್ತು.

ಆರಂಭಿಕ ಕೋವಿಡ್-19 ಪ್ರಕರಣಗಳ ಕಚ್ಚಾ ಮಾಹಿತಿಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರ ತಂಡಕ್ಕೆ ನೀಡಲು ಚೀನಾ ನಿರಾಕರಿಸಿದೆ ಎಂದು ತಂಡದ ಸದಸ್ಯರಲ್ಲಿ ಒಬ್ಬರಾದ ಡಾಮಿನಿಕ್ ಡ್ವಯರ್ ಕಳೆದ ತಿಂಗಳು ಹೇಳಿದ್ದರು. ಇದರಿಂದಾಗಿ ಸಾಂಕ್ರಾಮಿಕ ಹೇಗೆ ಆರಂಭವಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News