ಕನ್ಯಾಕುಮಾರಿ ಲೋಕಸಭಾ ಉಪಚುನಾವಣೆ: ರಾಧಾಕೃಷ್ಣನ್ ಬಿಜೆಪಿ ಅಭ್ಯರ್ಥಿ

Update: 2021-03-06 07:16 GMT

ಚೆನ್ನೈ:ಕನ್ಯಾಕುಮಾರಿ ಲೋಕಸಭಾ ಉಪ ಚುನಾವಣೆಗೆ ಪೊನ್ ರಾಧಾಕೃಷ್ಣನ್ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ. ಪೊನ್ ರಾಧಾಕೃಷ್ಣನ್ ಪಕ್ಷದ ಅಭ್ಯರ್ಥಿ ಎಂದು ಬಿಜೆಪಿ ಶನಿವಾರ ಪ್ರಕಟಿಸಿದೆ.

ಪೊನ್ ರಾಧಾಕೃಷ್ಣನ್ ಈ ಕ್ಷೇತ್ರವನ್ನು 1996ರಲ್ಲಿ ಜಯಿಸಿದ್ದರು. 2014ರಲ್ಲಿ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ವಸಂತಕುಮಾರ್ ವಿರುದ್ಧ ಸೋತಿದ್ದರು. 1999 ಹಾಗೂ 2014ರಲ್ಲಿ ಹೊರತುಪಡಿಸಿ ಉಳಿದಿರುವ ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ ಜಯ ಸಾಧಿಸಿಲ್ಲ. ಈ ಕ್ಷೇತ್ರವು ಕಾಂಗ್ರೆಸ್ ನ ಭದ್ರಕೋಟೆಯಾಗಿದೆ.

ಕನ್ಯಾಕುಮಾರಿ ಲೋಕಸಭಾ ಸಂಸದರಾಗಿದ್ದ ವಸಂತಕುಮಾರ್ ಕಳೆದ ವರ್ಷ ಕೊರೋನ ವೈರಸ್ ನಿಂದಾಗಿ ನಿಧನರಾಗಿದ್ದರು. ಹೀಗಾಗಿ ಈ ಕ್ಷೇತ್ರ ತೆರವಾಗಿತ್ತು.

ಆಡಳಿತರೂಢ ಎಐಎಡಿಎಂಕೆ ಹಲವು ಸುತ್ತಿನ ಮಾತುಕತೆಯ ಬಳಿಕ ಮೈತ್ರಿಪಕ್ಷ ಬಿಜೆಪಿಗೆ 20 ವಿಧಾನಸಭಾ ಕ್ಷೇತ್ರದ ಜತೆಗೆ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿತ್ತು. 

ಕಾಂಗ್ರೆಸ್ ನ  ಶಿವಗಂಗಾ ಲೋಕಸಭಾ ಕ್ಷೇತ್ರದ ಸಂಸದ ಕಾರ್ತಿ ಚಿದಂಬರಂ ಶುಕ್ರವಾರ ಪಕ್ಷದ ರಾಜ್ಯ ಚುನಾವಣಾ ಸಮಿತಿಗೆ  ಅರ್ಜಿಯನ್ನು ಸಲ್ಲಿಸಿದ್ದು, ಪ್ರಿಯಾಂಕಾ ಗಾಂಧಿಯವರನ್ನು ಕನ್ಯಾಕುಮಾರಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News