ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ 100 ದಿನ: ದಿಲ್ಲಿ ಹೊರಭಾಗದಲ್ಲಿ ಹೆದ್ದಾರಿಗಳನ್ನು ತಡೆದ ರೈತರು

Update: 2021-03-06 15:14 GMT
ಫೋಟೊ: ಎಎಫ್ ಪಿ

 ಹೊಸದಿಲ್ಲಿ,ಮಾ.6: ಕೇಂದ್ರದ ಮೂರು ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಶನಿವಾರ ನೂರನೇ ದಿನವನ್ನು ಪ್ರವೇಶಿಸಿದ್ದು,ಕರಾಳ ದಿನವನ್ನು ಆಚರಿಸಿದ ರೈತರು 136 ಕಿ.ಮೀ.ಉದ್ದದ ಕುಂಡ್ಲಿ-ಮನೇಸರ್-ಪಲ್ವಾಲ ಷಟ್ಪಥ ಹೆದ್ದಾರಿಯಲ್ಲಿ ಕೆಲವು ಕಡೆಗಳಲ್ಲಿ ತಡೆಗಳನ್ನು ನಿರ್ಮಿಸಿದ್ದರು. ಇದರಿಂದಾಗಿ ಸಾವಿರಾರು ವಾಹನಗಳು,ಪ್ರಯಾಣಿಕರು ಹೆದ್ದಾರಿಯಲ್ಲಿ ಬಾಕಿಯಾಗಿದ್ದರು. ಬೆಳಿಗ್ಗೆ 11 ಗಂಟೆಗೆ ಆರಂಭವಾಗಿದ್ದ ರಸ್ತೆ ತಡೆಯು ಮಧ್ಯಾಹ್ನ ಮೂರು ಗಂಟೆಗೆ ಅಂತ್ಯಗೊಂಡಿತು. ಪ್ರತಿಭಟನಾಕಾರರು ತುರ್ತು ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯನ್ನುಂಟು ಮಾಡಿರಲಿಲ್ಲ.

ಪ್ರತಿಭಟನಾನಿರತ ರೈತ ಸಂಘಟನೆಗಳ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಶನಿವಾರದ ‘ಚಕ್ಕಾ ಜಾಮ್’ಗೆ ಕರೆನೀಡಿತ್ತು.

ಪ್ರತಿಭಟನೆ ಶಾಂತಿಯುತವಾಗಿತ್ತು ಎಂದು ಭಾರತೀಯ ಕಿಸಾನ್ ಯೂನಿಯನ್(ದಕೌಂಡಾ)ನ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿದ ಮಾಜಿ ಯೂನಿಯನ್ ನಾಯಕ ಧೀರಜ್ ಸಿಂಗ್ ಅವರು,‘ನಮ್ಮ ಪ್ರತಿಭಟನೆಯು ಶಾಂತಿಯುತವಾಗಿರುತ್ತದೆ. ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಹಾನಿಯನ್ನುಂಟು ಮಾಡುವುದಿಲ್ಲ’ಎಂದು ಹೇಳಿದರು.

ಹೆದ್ದಾರಿಯಲ್ಲಿ ತಡೆಗಳನ್ನು ನಿರ್ಮಿಸಲು ತಮ್ಮ ಟ್ರಾಕ್ಟರ್‌ಗಳನ್ನು ತಂದಿದ್ದ ಹರ್ಯಾಣದ ಸೋನಿಪತ್‌ನ ರೈತರು ಅವುಗಳನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದರು ಮತ್ತು ಇದು ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಕಪ್ಪು ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News