​ಒಂದು ರಾಷ್ಟ್ರ ಒಂದು ಚುನಾವಣೆ: ಈ ಬಗ್ಗೆ ಚರ್ಚೆ ಆಕಾಶಕ್ಕೆ ಮೆಟ್ಟಿಲಿಡುವ ಪರಿಸ್ಥಿತಿ: ಯು.ಟಿ.ಖಾದರ್

Update: 2021-03-06 09:29 GMT

ಮಂಗಳೂರು, ಮಾ.6: ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಂತೆ ಚರ್ಚೆ ಆಕಾಶಕ್ಕೆ ಮೆಟ್ಟಿಲಿಡುವ ಪರಿಸ್ಥಿತಿ. ಇದು ಡಾ.ಬಿ.ಆರ್.ಅಂಬೇಡ್ಕರ್ರವರ ಮೂಲ ಸಂವಿಧಾನದ ಚೌಕಟ್ಟನ್ನೇ ಪರೋಕ್ಷವಾಗಿ ಬದಲಾವಣೆ ಮಾಡುವ ಉದ್ದೇಶವನ್ನು ಹೊಂದಿರುವಂತದ್ದು. ಇದು ಚರ್ಚೆ ಮಾಡುವ ವಿಷಯವೇ ಅಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ದೇಶ ಒಂದು ಚುನಾವಣೆಯು ಪ್ರಾದೇಶಿಕ ಪಕ್ಷಗಳು ಹಾಗೂ ಪ್ರಾದೇಶಿಕ ಸಮಸ್ಯೆಗಳಿಗೆ ಮಹತ್ವ ಇಲ್ಲದಂತಾಗಲಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೂ ವಿರುದ್ಧವಾದುದು ಎಂದು ಅಭಿಪ್ರಾಯಿಸಿದ್ದಾರೆ.

ಕಾಂಗ್ರೆಸ್ ಈ ಕುರಿತು ಚರ್ಚೆಗೆ ಒಪ್ಪಿಗೆ ನೀಡಿಲ್ಲ. ಚರ್ಚೆ ಮಾಡಲು ಅವಕಾಶ ಇದೆ ಎಂದು ಹೇಳಿರುವ ಕೇಂದ್ರ ಸರಕಾರವು ಚರ್ಚೆಗೆ ಜನಸಾಮಾನ್ಯರ ಹಲವಾರು ಸಮಸ್ಯೆಗಳಿವೆ ಎಂಬುದನ್ನು ಅರಿಯಬೇಕು. ತೈಲ ಬೆಲೆ, ಅಡುಗೆ ಅನಿಲ ದರ, ಜಿಎಸ್ಟಿಯಿಂದ ರಾಜ್ಯ ಸರಕಾರಕ್ಕೆ ಸಿಗಬೇಕಾದ ಪಾಲು ಈ ಬಗ್ಗೆ ಚರ್ಚೆ ಮಾಡಲು ಸರಕಾರ ಮುಂದಾಗಲಿ ಎಂದು ಅವರು ಹೇಳಿದರು.

ಒಂದು ದೇಶ ಒಂದು ಚುನಾವಣೆಗೆ ಸಂವಿಧಾನಾತ್ಮಕ ಬದಲಾವಣೆಗಳ ಅಗತ್ಯವಿದ್ದು, ಇದು ದೇಶದ ಸಾರ್ವಭೌಮತೆಗೆ ಧಕ್ಕೆ ತರಲಿದೆ ಎಂದರು.

ಕೆಂಜಾರಿನ ಗೋಶಾಲೆ ತೆರವು ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಶಾಸಕ ಯು.ಟಿ.ಖಾದರ್, ಗೋಶಾಲೆ ಅತಿಕ್ರಮಣವಾಗಿದ್ದಲ್ಲಿ ಅದನ್ನು ತೆರವುಗೊಳಿಸುವ ಮೊದಲು ಅಲ್ಲಿದ್ದ ದನಕರುಗಳನ್ನು ಜಿಲ್ಲೆಯ ಬೇರೆ ಗೋಶಾಲೆಗಳಿಗೆ ಸ್ಥಳಾಂತರಿಸುವ ಜತೆಗೆ ಅಗತ್ಯ ಅನುದಾನವನ್ನು ಸರಕಾರದಿಂದ ಕಲ್ಪಿಸಬೇಕಿತ್ತು. ಯಾವುದೇ ಪರ್ಯಾಯವನ್ನು ಕಲ್ಪಿಸದೆ ಆ ಮೂಕ ಪ್ರಾಣಿಗಳನ್ನು ಬೀದಿಯಲ್ಲಿ ಬಿಡಲಾಗಿದೆ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯ ಸರಕಾರವಿದ್ದಾಗ ಕೋಸ್ಟ್ ಗಾರ್ಡ್ ಅಕಾಡಮಿಗೆ ಆ ಜಾಗವನ್ನು ಮಂಜೂರು ಮಾಡಿತ್ತು. ಈ ಜಾಗದ ಅತಿಕ್ರಮಣ ಸಮಸ್ಯೆಯನ್ನು ಬಗೆಹರಿಸದೆ ಜಿಲ್ಲಾಡಳಿತ ಗೋಶಾಲೆಯನ್ನೇ ಕೆಡವಿದೆ. ಗೋವೂಗಳಿಗೂ ಅವುಗಳ ಹಕ್ಕಿಲ್ಲವೇ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News