×
Ad

ಉತ್ತರಪ್ರದೇಶ: ಬಿಲ್ ಪಾವತಿಸಿಲ್ಲವೆಂದು ಆಪರೇಷನ್ ಮಾಡಿ ಹೊಲಿಗೆ ಹಾಕದ ವೈದ್ಯರು; ಮಗು ಮೃತ್ಯು

Update: 2021-03-06 17:04 IST
photo: ndtv.com

ಲಕ್ನೋ: ಹೆತ್ತವರು ಆಸ್ಪತ್ರೆಯ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಪ್ರಯಾಗರಾಜ್‍ ನ ಆಸ್ಪತ್ರೆಯೊಂದರ ಎದುರುಗಡೆ ಸೂಕ್ತ ಚಿಕಿತ್ಸೆ ದೊರೆಯದೆ ಮೂರು ವರ್ಷದ ಬಾಲಕಿ ಮೃತಪಟ್ಟ ಘಟನೆಯ ತನಿಖೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ  ಆಯೋಗ ಮುಂದಾಗಿದೆ. ಉತ್ತರ ಪ್ರದೇಶ ಸರಕಾರ ಕೂಡ ಘಟನೆಯ ತನಿಖೆಗೆ ಆದೇಶಿಸಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಶಸ್ತ್ರಕ್ರಿಯೆಯ ಗಾಯಗಳನ್ನು ಹಾಗೆಯೇ ತೆರೆದ ಸ್ಥಿತಿಯಲ್ಲಿ ಬಿಡಲಾಗಿರುವುದು ಕಾಣಿಸುತ್ತದೆ.

ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡ ವರದಿಯನ್ನು 24 ಗಂಟೆಗಳೊಳಗೆ ಸಲ್ಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚಿಸಿದೆಯಲ್ಲದೆ  ಘಟನೆ ನಡೆದ ಯುನೈಟೆಡ್ ಮೆಡಿಸಿಟಿ ಆಸ್ಪತ್ರೆ ಹಾಗೂ ಅದರ ವೈದ್ಯರ ವಿರುದ್ಧ ಕರ್ತವ್ಯಲೋಪಕ್ಕೆ ಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಿದೆ.

ಐದು ಲಕ್ಷ ರೂಪಾಯಿ  ಪಾವತಿಸುವಂತೆ ಆಸ್ಪತ್ರೆಯ ಆಡಳಿತ ಹೇಳಿದ್ದು ತಮ್ಮಿಂದ ಅಷ್ಟೊಂದು ಹಣ ನೀಡುವುದು ಸಾಧ್ಯವಿಲ್ಲವೆಂದಾಗ ಶಸ್ತ್ರಕ್ರಿಯೆ ನಡೆಸಲಾದ ಜಾಗಕ್ಕೆ ಹೊಲಿಗೆಯನ್ನೂ ಹಾಕದೆ ಮಗುವನ್ನು ಡಿಸ್ಚಾರ್ಜ್ ಗೊಳಿಸಲಾಗಿತ್ತು ಎಂದು ಹೆತ್ತವರು ಆರೋಪಿಸಿದ್ದಾರೆ ಆದರೆ ಆಸ್ಪತ್ರೆ ಮಾತ್ರ ಈ ಆರೋಪವನ್ನು ನಿರಾಕರಿಸಿದೆ.

ವೀಡಿಯೋದಲ್ಲಿ  ಬಾಲಕಿಯ ಮೂಗಿನಲ್ಲಿ ನಳಿಕೆಯಿರುವುದು ಹಾಗೂ ಆಕೆಯ ತಂದೆ ಮಾತನಾಡುತ್ತಿರುವಾಗಲೇ ಆಕೆ ನೋವಿನಿಂದ ಅಳುತ್ತಿರುವುದು ಕಾಣಿಸುತ್ತದೆ, ಇನ್ನೊಂದು ವೀಡಿಯೋದಲ್ಲಿ ಆಕೆಯ ದೇಹದಲ್ಲಿದ್ದ ಗಾಯಗಳ ಸುತ್ತ ನೊಣಗಳು ಹಾರುತ್ತಿರುವುದು ಹಾಗೂ ಕೊನೆಗೆ ಆಕೆ ಪ್ರಾಣಬಿಡುತ್ತಿರುವುದು ಕಾಣುತ್ತದೆ.

ಹೊಟ್ಟೆ ಭಾಗದ ಎರಡು ಶಸ್ತ್ರಕ್ರಿಯೆ ಬಳಿಕ ಆಸ್ಪತ್ರೆ ಗಾಯಗಳಿಗೆ ಹೊಲಿಗೆ ಹಾಕದೆಯೇ ಹೊರಕ್ಕೆ ಕಳುಹಿಸಿತ್ತು ಎಂದು ಹೆತ್ತವರು ಆರೋಪಿಸಿದ್ದಾರೆ. ಯುನೈಟೆಡ್ ಮೆಡಿಸಿಟಿ ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ ಬಾಲಕಿಗೆ ಅವರ ಆಸ್ಪತ್ರೆಯಲ್ಲಿ 15 ದಿನಗಳ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಬೇರೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಕೆಯ ಬಿಲ್ ರೂ 1.2 ಲಕ್ಷ ಆಗಿದ್ದರೂ ಕೇವಲ ರೂ 6000 ಪಡೆಯಲಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News