ಬದುಕನ್ನು ಎದುರಿಸುವ ಸಾಮರ್ಥ್ಯ ನೀಡುವುದು ಶಿಕ್ಷಣ : ಸಚಿವ ಸುರೇಶ್ ಕುಮಾರ್

Update: 2021-03-06 11:35 GMT

ಸುಳ್ಯ : ಬದುಕಿನ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸುವ ಸಮಾಜಮುಖಿ ಚಿಂತನೆಯ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳು ಇಂದಿನ ಅಗತ್ಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ‌ಕುಮಾರ್ ಹೇಳಿದ್ದಾರೆ.

ಸುಳ್ಯದ ಸ್ನೇಹ ಶಾಲೆಯ ಬೆಳ್ಳಿಹಬ್ಬ ಮತ್ತು ಶಾಲೆಯ ಸ್ಥಾಪಕ ಡಾ.ಚಂದ್ರಶೇಖರ ದಾಮ್ಲೆ ಅವರ ಅಭಿನಂದನಾ ಸಮಾರಂಭ ‘ಸ್ನೇಹಯಾನ’ ಕಾರ್ಯಕ್ರಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಶಾಲೆಗಳು ಅಂಕಾಲಯಗಳಾಗಿ ಮಾರ್ಪಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಭಾಷಾ ದಾರಿದ್ರ್ಯ ಉಂಟಾಗಿದೆ. ಕನ್ನಡ ಕಲಿಯು ವುದಿಲ್ಲ, ಇಂಗ್ಲೀಷ್ ಬರುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಂತಹಾ ಸಂದರ್ಭಗಳಲ್ಲಿ ಸ್ನೇಹ ಶಾಲೆಯಂತಹಾ ಶಿಕ್ಷಣ ಸಂಸ್ಥೆಗಳು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ನೆಲದ ನಂಟು ಬಿಡುಗಡೆ

ಸ್ನೇಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಡಾ.ಚಂದ್ರಶೇಖರ ದಾಮ್ಲೆ ಮತ್ತು ಜಯಲಕ್ಷ್ಮಿ ದಾಮ್ಲೆ ದಂಪತಿಗಳನ್ನು ಸನ್ಮಾನಿಸಿ, ಡಾ.ದಾಮ್ಲೆ ಅವರು ಬರೆದ ‘ನೆಲದ ನಂಟು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ನಿಸ್ವಾರ್ಥ ಮನೋಭಾವನೆ, ನಮ್ಮತನ ಉಳಿಸಿಕೊಳ್ಳುವ ವ್ಯಕ್ತಿತ್ವ ಮತ್ತು ನಡೆದು ಬಂದ ದಾರಿಯ ನೆನಪು ಇದ್ದರೆ ಆದರ್ಶ ವ್ಯಕ್ತಿಗಳಾಗಲು ಸಾಧ್ಯ ಎಂದು ಹೇಳಿದರು.

ಪ್ರಾಥಮಿಕ ಶಾಲೆಗಳು ಕೂಡಲೇ ಆರಂಭಿಸಿ: ಡಾ.ಮೋಹನ್ ಆಳ್ವ 

ಡಾ.ಚಂದ್ರಶೇಖರ ದಾಮ್ಲೆ ಅಭಿನಂದನಾ ಗ್ರಂಥ ‘ಸ್ನೇಹಯಾನ’ ಬಿಡುಗಡೆ ಮಾಡಿ ಮಾತನಾಡಿದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಆಳ್ವ ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿಯೂ ಉನ್ನತ ಮೌಲ್ಯದ ಚಿಂತನೆಗಳು ಇವೆ. ಆದುದರಿಂದ ಎಲ್ಲಾ ಖಾಸಗೀ ಶಿಕ್ಷಣ ಸಂಸ್ಥೆಗಳನ್ನು ಅಪನಂಬಿಕೆಯಿಂದ ನೋಡಬೇಕಾಗಿಲ್ಲ ಎಂದು ಹೇಳಿದರು‌.

ಕೊರೋನ ಬಳಿಕ ವಿದ್ಯಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದ ಅವರು ಪ್ರಾಥಮಿಕ ಹಂತದ ಶಾಲೆಗಳನ್ನು ಕೂಡಲೇ ಆರಂಭಿಸಿ ಎಂದು ಸರಕಾರವನ್ನು ಒತ್ತಾಯಿಸಿದರು. ಕನ್ನಡ ಶಾಲೆಗಳು ಎಂದೂ ಸೋಲುವುದಿಲ್ಲ ಎಂದ ಅವರು ಉತ್ತಮ ಲಾಭ ಗಳಿಸುವ ಕಂಪೆನಿಗಳು ಕನ್ನಡ ಶಾಲೆಗಳನ್ನು ಆರಂಭಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಶಾಲೆಗಳು ಸೃಜನಶೀಲತೆಯ ತಾಣವಾಗಲಿ- ಡಾ.ದೇರ್ಲ 

ಅಭಿನಂದನಾ ಭಾಷಣ ಮಾಡಿದ ಕನ್ನಡ ಪ್ರಾಧ್ಯಾಪಕ, ಲೇಖಕ ಡಾ.ನರೇಂದ್ರ ರೈ ದೇರ್ಲ ಮಾತನಾಡಿ ಬಡತನ ಮತ್ತು ರೈತ ಗುಣ ಇದ್ದ ಕಾರಣ ಡಾ.ದಾಮ್ಲೆಯವರಲ್ಲಿ ಈ ನೆಲದ ನಂಟು ಸದಾ ಇದೆ ಎಂದು ಹೇಳಿದರು. ಶಿಕ್ಷಣ ಸಂಸ್ಥೆಗಳು ಇಂದು ಕಟ್ಟಡ ಸಮುಚ್ಛಯಗಳಾಗಿ ಮಾರ್ಪಾಡಾಗಿದ್ದು ಯಾವುದು ಆಗಬೇಕಾಗಿದೆಯೋ ಅದು ಆಗ್ತಾ ಇಲ್ಲ. ಆದುದರಿಂದ ಶಾಲೆಗಳು ಕೇವಲ ಕಟ್ಟಡಗಳಾಗಿರದೆ ಸೃಜನಶೀಲತೆಯ ತಾಣವಾಗಬೇಕು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಚಂದ್ರಶೇಖರ ದಾಮ್ಲೆ ವಿದ್ಯಾರ್ಥಿಗಳು ಅರ್ಥೈಸಿಕೊಂಡು ಕಲಿಯಬೇಕು ಎಂಬ ದೃಷ್ಠಿಯಿಂದ ಸಮಾನ ಮನಸ್ಕ ಗೆಳೆಯರು ಸೇರಿ ಕನ್ನಡ ಭಾಷೆಯ ಶಾಲೆಯನ್ನು ಆರಂಭಿಸಿದ್ದೇವೆ ಎಂದು ಹೇಳಿದರು. ಶಾಲೆಗಳಿಗೆ ಮಾನ್ಯತೆ ನೀಡುವಾಗ ಪ್ರಜಾ ಪ್ರಭುತ್ವ ನೆಲೆಯ ಪರಿಗಣನೆ ನೀಡಬೇಕು ಎಂದು ಹೇಳಿದರು.

ಡಾ.ಚಂದ್ರಶೇಖರ ದಾಮ್ಲೆ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ, ವಿಶ್ರಾಂತ ಪ್ರಾಂಶುಪಾಲ, ಪ್ರೊ. ಎಂ. ಬಾಲಚಂದ್ರ ಗೌಡರ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ, ಡಾ.ದಾಮ್ಲೆ ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಭಾರದ್ವಾಜ್, ಸ್ನೇಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಸ್.ಕೆ.ಆನಂದಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಚಂದ್ರಶೇಖರ ದಾಮ್ಲೆ ಅಭಿನಂದನಾ ಸಮಿತಿಯ ಕಾರ್ಯದರ್ಶಿ ಕಟೀಲು ಸಿತ್ಲ ರಂಗನಾಥ ರಾವ್ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಪಿ.ಬಿ.ಸುಧಾಕರ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ಳಿಹಬ್ಬ ಸ್ಮರಣ ಸಂಚಿಕೆಯ ಕುರಿತು ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ, ‘ಸ್ನೇಹ ಯಾನ’ ಅಭಿನಂದನಾ ಗ್ರಂಥದ ಬಗ್ಗೆ ಗಣರಾಜ ಕುಂಬಳೆ ಮಾತನಾಡಿದರು. ಅಕ್ಷರ ದಾಮ್ಲೆ ಪ್ರಾರ್ಥನೆ ಹಾಡಿದರು. ಸ್ನೇಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿದ್ಯಾಶಾಂಭವ ಪಾರೆ ವಂದಿಸಿದರು. ಮಡಿಕೇರಿ ಆಕಾಶವಾಣಿಯ ಉದ್ಘೋಷಕ ರಾದ ಸುಬ್ರಾಯ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಕರ ದಾಮ್ಲೆ, ಸಮೀರ ದಾಮ್ಲೆ, ಅಕ್ಷರ ದಾಮ್ಲೆ ಸಹಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News