ಬಿಜೆಪಿ ಶಾಸಕನ ಹುಟ್ಟುಹಬ್ಬ ಪಾರ್ಟಿಯಲ್ಲಿ ಇಬ್ಬರ ಹತ್ಯೆ

Update: 2021-03-06 13:19 GMT

ಭೋಪಾಲ್: ಮಧ್ಯ ಪ್ರದೇಶದ ದಮೋಹ್ ಜಿಲ್ಲೆಯ ಬನ್ವಾರ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ಶಾಸಕರೊಬ್ಬರ ಹುಟ್ಟುಹಬ್ಬ ಪಾರ್ಟಿಯ ಸಂದರ್ಭ ಭುಗಿಲೆದ್ದ ವಿವಾದವೊಂದು ಇಬ್ಬರು ವ್ಯಕ್ತಿಗಳ ಹತ್ಯೆಗೆ ಕಾರಣವಾಗಿದೆ.

ಜಬೇರ ಕ್ಷೇತ್ರದ ಬಿಜೆಪಿ ಶಾಸಕ ಧರ್ಮೇಂದ್ರ ಸಿಂಗ್ ಲೋಧಿ ಅವರ ಹುಟ್ಟುಹಬ್ಬ ಆಚರಣೆಗೆ ಆಗಮಿಸಿದ್ದ ಅತಿಥಿಗಳ ನಡುವೆ ವಿವಾದವೊಂದು ಏರ್ಪಟ್ಟ ನಂತರ ಉಂಟಾದ ಘರ್ಷಣೆಯಲ್ಲಿ ಜೋಗೇಂದ್ರ ಸಿಂಗ್ ಹಾಗೂ ಅರವಿಂದ್ ಜೈನ್ ಎಂಬ ಇಬ್ಬರು ವ್ಯಕ್ತಿಗಳ ಕೊಲೆ ನಡೆದಿದೆ. ಜೋಗೇಂದ್ರ ಗುಂಡೇಟಿನಿಂದ ಸತ್ತರೆ ಅರವಿಂದ್‍ನನ್ನು ಕೋಲುಗಳು ಹಾಗೂ ಕಲ್ಲುಗಳಿಂದ ಹೊಡೆದು ಸಾಯಿಸಲಾಗಿದೆ ಎಂದು ಪೊಲೀಸರು  ಹೇಳಿದ್ದಾರೆ.

ಅರವಿಂದ್  ಜೈನ್ ಶಾಸಕನ ಪ್ರತಿನಿಧಿಯಾಗಿದ್ದರೆ  ಜೋಗೇಂದ್ರ  ಒಬ್ಬ ಅತಿಥಿ ಶಿಕ್ಷಕನಾಗಿದ್ದ. ಘಟನೆ ನಡೆದಾಗ ಶಾಸಕ ಅಲ್ಲಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ರಾಷ್ಟ್ರಪತಿಗಳು ದಮೋಹ್ ಜಿಲ್ಲೆಗೆ ಭೇಟಿ ನೀಡುವ ಮುನ್ನ ನಡೆದ ಇಂತಹ ಒಂದು ಘಟನೆ ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಜಯ್ ಟಂಡನ್ ಆರೋಪಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ದಮೋಹ್ ಜಿಲ್ಲೆಯ ಜಲ್ಹರಿ ಗ್ರಾಮಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News