‘ವಿಶ್ವ ಪ್ರಭಾ’ ಪುರಸ್ಕಾರಕ್ಕೆ ಡಾ. ಮೋಹನ್ ಆಳ್ವ ಆಯ್ಕೆ

Update: 2021-03-06 13:44 GMT

ಉಡುಪಿ, ಮಾ. 6: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕರಿಂದ ಉದ್ಘಾಟನೆಗೊಂಡ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಈ ವರ್ಷ ಪ್ರಥಮ ಬಾರಿಗೆ ನೀಡಲಿರುವ ‘ವಿಶ್ವ ಪ್ರಭಾ ಪುರಸ್ಕಾರ’ಕ್ಕೆ ಕನ್ನಡನಾಡು, ನುಡಿ ಹಾಗೂ ಸಂಸ್ಕೃತಿಗೆ ಅಮೂಲ್ಯ ಸೇವೆ ಸಲ್ಲಿಸಿದ ಮೂಡಬಿದ್ರೆ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ್ ಆಳ್ವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಮರವಂತೆ ನಾಗರಾಜ ಹೆಬ್ಬಾರ್ ಪ್ರಕಟಿಸಿದ್ದಾರೆ.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರೂ, ಪ್ರಸ್ತುತ ಅದರ ಗೌರವಾಧ್ಯಕ್ಷರೂ ಆಗಿರುವ ಉಡುಪಿ ವಿಶ್ವನಾಥ್ ಶೆಣೈ ಅವರು ತನ್ನ ಹಾಗೂ ಪತ್ನಿಯ ಹೆಸರಿನಲ್ಲಿ ನೀಡಿರುವ ಈ ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ ಎಂದವರು ನುಡಿದರು.

ಉಡುಪಿಯಲ್ಲಿ ಸಾಹಿತ್ಯ, ಸಂಗೀತ, ಚಿತ್ರಕಲೆ, ಸಾಕ್ಷಚಿತ್ರ, ನಾಟಕ, ನೃತ್ಯ, ಲಲಿತ ಕಲೆಗಳ ಕುರಿತಂತೆ ಯುವಪೀಳಿಗೆಯಲ್ಲಿ ಆಸಕ್ತಿ ಮೂಡಿಸಲು ಹಲವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ ಸಂಸ್ಥೆ ಕೊರೋನ ಹಾಗೂ ಲಾಕ್‌ಡೌನ್ ಸಂದರ್ಭದಲ್ಲೂ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಮತ್ತು ಫೇಸ್‌ಬುಕ್‌ಗಳಲ್ಲಿ ಹಲವು ಅಪರೂಪದ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅದನ್ನು ದೇಶ-ವಿದೇಶಗಳ ಐದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು ಎಂದು ಸಂಚಾಲಕ ರವಿರಾಜ್ ಎಚ್.ಪಿ. ತಿಳಿಸಿದರು.

ಇದರೊಂದಿಗೆ ಜಾನಪದ ಉತ್ಸವ, ಏಕವ್ಯಕ್ತಿ ನಾಟಕ, ಬಡವರಿಗೆ ಸಹಾಯ ಹಸ್ತ, ಮಲಬಾರ್ ವಿಶ್ವರಂಗ ಪುರಸ್ಕಾರ, ಸಾಮಾಜಿಕ ಅರಿವು ಮೂಡಿಸುವ ಬೀದಿ ನಾಟಕ, ಪುಸ್ತಕ ಬಿಡುಗಡೆ ಇನ್ನಿತರ ಕಾರ್ಯಕ್ರಮಗಳನ್ನು ಉಡುಪಿ ಜಿಲ್ಲೆಯ ಸುತ್ತಮುತ್ತ ಸಂಸ್ಥೆ ನಿರಂತರವಾಗಿ ನಡೆಸುತ್ತಾ ಬಂದಿದೆ ಎಂದರು.

ವಿಶ್ವ ಪ್ರಭಾ ಪ್ರಶಸ್ತಿ ಪ್ರದಾನ ಸಮಾರಂಭ ಎಪ್ರಿಲ್ ತಿಂಗಳ 3 ಮತ್ತು 4ರಂದು ಉಡುಪಿಯಲ್ಲಿ ನಡೆಯುವ ಪ್ರತಿಷ್ಠಾನದ ಉತ್ಸವ ಸಂದರ್ಭದಲ್ಲಿ ನೀಡಲಾಗುವುದು. ಈ ಸಂದರ್ಭದಲ್ಲಿ ಎರಡು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುವುದು ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ತೆಯ ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಉಪಾಧ್ಯಕ್ಷರಾದ ಸಂಧ್ಯಾ ಶೆಣೈ ಸಹ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News