ಪುಟ್ಟ ಮಗುವನ್ನು ಅಪ್ಪಿಕೊಂಡೇ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಟ್ರಾಫಿಕ್ ಪೊಲೀಸ್: ವೀಡಿಯೋ ವೈರಲ್

Update: 2021-03-06 14:09 GMT

ಚಂಡೀಗಢ: ತನ್ನ ತೋಳಿನಲ್ಲಿ ಪುಟ್ಟ ಮಗುವನ್ನು ತಬ್ಬಿಕೊಂಡೇ ರಸ್ತೆಯ ಬದಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಟ್ರಾಫಿಕ್ ಪೊಲೀಸ್ ಓರ್ವರ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ. 

ಬೆಳಗ್ಗೆ 11ರ ವೇಳೆ ಮಹಿಳಾ ಟ್ರಾಫಿಕ್ ಪೊಲೀಸ್ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಸೆಕ್ಟರ್ 15/23ರ ನಿವಾಸಿಯೋರ್ವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಈ ಕುರಿತಾದಂತೆ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕೆಲವರು ಅವರ ಕರ್ತವ್ಯ ಪ್ರಜ್ಞೆಯ ಕುರಿತಾದಂತೆ ಪ್ರಶಂಸೆ ವ್ಯಕ್ತಪಡಿಸಿದ್ದರೆ ಇನ್ನು ಕೆಲವರು ಮಗುವನ್ನು ಮನೆಯಲ್ಲಿ ಬಿಟ್ಟು ಬರುವಂತೆ ಸಲಹೆ ನೀಡಿದ್ದಾರೆ.

ಮಗುವನ್ನು ಅಪ್ಪಿಕೊಂಡು ಕೆಲಸ ನಿರ್ವಹಿಸುವ ಕುರಿತು ಆಕೆಯ ಹಿರಿಯ ಅಧಿಕಾರಿಗಳು ಯಾಕೆ ಗಮನ ಹರಿಸಿಲ್ಲ ಎಂಬ ಪ್ರಶ್ನೆಯನ್ನೂ ಹಲವರು ಸಾಮಾಜಿಕ ತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 8 ಗಂಟೆಗೆ ಪ್ರಿಯಾಂಕಾರನ್ನು ಕರ್ತವ್ಯಕ್ಕೆ ಆಗಮಿಸುವಂತೆ ಹೇಳಲಾಗಿತ್ತು. ಆದರೆ ಆಕೆ ಆಗಮಿಸಿರಲಿಲ್ಲ ಎಂದಷ್ಟೇ ಹಿರಿಯ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ. ಮೂಲಗಳ ಪ್ರಕಾರ, ಆಕೆಯ ಮತ್ತು ಹಿರಿಯ ಅಧಿಕಾರಿಗಳ ನಡುವೆ ವಾಗ್ಯುದ್ಧ ನಡೆದ ಕಾರಣದಿಂದ ಆಕೆ ಮಗುವನ್ನು ಅಪ್ಪಿಕೊಂಡೇ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News