ಮಂಗಳೂರು : ಬುದ್ಧಿವಾದ ಹೇಳಿದ್ದಕ್ಕೆ ಸಹೋದರನನ್ನೇ ಹತ್ಯೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

Update: 2021-03-06 15:10 GMT

ಮಂಗಳೂರು, ಮಾ.6: ಬುದ್ಧಿವಾದ ಹೇಳಿದ್ದಕ್ಕೆ ತನ್ನ ದೊಡ್ಡಪ್ಪನ ಮಗನನ್ನೇ ಕೊಲೆಗೈದಿದ್ದ ಆರೋಪದಲ್ಲಿ ಯುವಕನಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಬಂಟ್ವಾಳ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿಯ ನಿವಾಸಿ ರಾಜೇಶ ಯಾನೆ ನವೀನ (27) ಶಿಕ್ಷೆಗೊಳಗಾದ ಯುವಕ. ಈತ ತನ್ನ ದೊಡ್ಡಪ್ಪನ ಮಗ ರಂಜಿತ್ (27) ಎಂಬವರನ್ನು 2017ರ ಮೇ 15ರಂದು ರಾತ್ರಿ ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ.

ಪ್ರಕರಣ ವಿವರ: ಶಿಕ್ಷೆಗೊಳಗಾದ ರಾಜೇಶ ಮತ್ತು ಕೊಲೆಯಾದ ರಂಜಿತ್‌ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿಯ ನಿವಾಸಿಗಳಾಗಿದ್ದು, ಅಣ್ಣ-ತಮ್ಮಂದಿರ ಮಕ್ಕಳು. ಇವರ ಮನೆಗಳು ಆಸುಪಾಸಿನಲ್ಲಿದ್ದವು. ಆರೋಪಿ ರಾಜೇಶನಿಗೆ ವಿಪರೀತ ಮದ್ಯ ಸೇವನೆ ಚಟವಿತ್ತು. ಆತನಿಗೆ ಬುದ್ಧಿ ಮಾತು ಹೇಳಿದರೂ ಕೇಳುತ್ತಿರಲಿಲ್ಲ. ಇದರಿಂದ ನೊಂದಿದ್ದ ಆತನ ಹೆತ್ತವರು ಆತನಿಗೆ ಬುದ್ಧಿ ಹೇಳುವಂತೆ ರಂಜಿತ್ ಮತ್ತು ಆತನ ತಂದೆ ತಾಯಿಯವರಿಗೆ ಹೇಳಿದ್ದರು. ಅದರಂತೆ ರಂಜಿತ್ ಹಲವು ಬಾರಿ ರಾಜೇಶನಿಗೆ ಬುದ್ಧಿ ಮಾತು ಹೇಳಿದ್ದು, ಇದರಿಂದ ರಂಜಿತ್ ಮೇಲೆ ರಾಜೇಶನಿಗೆ ವೈಮನಸ್ಸು ಉಂಟಾಗಿತ್ತು.

2017ರ ಮೇ 15ರಂದು ರಾತ್ರಿ ಬಿ.ಸಿ.ರೋಡ್‌ನ ಬಾರ್‌ನಲ್ಲಿ ರಾಜೇಶ್ ಆತನ ಗೆಳೆಯರೊಂದಿಗೆ ಮದ್ಯ ಸೇವಿಸುತ್ತಿದ್ದು, ಈ ವೇಳೆ ರಂಜಿತ್ ಬುದ್ಧಿ ಮಾತು ಹೇಳಿದ. ಅಲ್ಲದೆ, ರಾಜೇಶ್‌ನು ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ಆತನನ್ನು ಶೇಡಿಗುರಿ ಎಂಬಲ್ಲಿ ತಡೆದು ನಿಲ್ಲಿಸಿ ಕೈಯಿಂದ ಹೊಡೆದಿದ್ದ. ಇದರಿಂದ ರಾಜೇಶ್ ಮತ್ತಷ್ಟು ಮುನಿಸಿಕೊಂಡು ಪ್ರತೀಕಾರವಾಗಿ ರಂಜಿತ್‌ನನ್ನು ಕೊಲೆ ಮಾಡಬೇಕು ಎಂದು ನಿರ್ಧರಿಸಿದ. ಅಂದು ರಾತ್ರಿ 10 ಗಂಟೆಯ ವೇಳೆಗೆ ರಂಜಿತ್ ತನ್ನ ಮನೆಗೆ ಹೋಗಿದ್ದ. ಆ ವೇಳೆ ರಾಜೇಶ್ ಕೈಯಲ್ಲಿ ಚೂರಿ ಹಿಡಿದುಕೊಂಡು ರಂಜಿತ್‌ನ ಮನೆಗೆ ಹೋಗಿ ರಂಜಿತ್‌ನ ತಂದೆ ಗಣೇಶ್ ಪೂಜಾರಿ ಅವರನ್ನು ಕರೆದಾಗ ಗಣೇಶ್ ಪೂಜಾರಿ, ಬಳಿಕ ಅವರ ಪತ್ನಿ ಲಲಿತಾ ಮತ್ತು ಪುತ್ರ ರಂಜಿತ್ ಹೊರಗೆ ಬಂದರು.

ಈ ವೇಳೆ ರಾಜೇಶ್ ಚೂರಿಯಿಂದ ರಂಜಿತ್‌ನ ಗಂಟಲಿಗೆ ಬಲವಾಗಿ ತಿವಿದ. ಅದನ್ನು ತಡೆಯಲು ಮುಂದಾದ ಗಣೇಶ್ ಪೂಜಾರಿ ಅವರ ಬಲಕೈಗೂ ಚೂರಿಯಿಂದ ಗಾಯವಾಗಿತ್ತು. ಆಗ ಅಕ್ಕಪಕ್ಕದವರು ಕೂಡ ಓಡಿ ಬಂದು ತೀವ್ರ ಗಾಯಗೊಂಡ ರಂಜಿತ್‌ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗ ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿದ್ದು ಪ್ರಸ್ತುತ ಬೀದರ್ ಎಸ್‌ಪಿ ಆಗಿರುವ ನಾಗೇಶ್ ಡಿ.ಎಲ್. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ವಿಚಾರಣೆ ನಡೆಸಿದರು. ಸಂತ್ರಸ್ತನ ಪರ 19 ಮಂದಿಯನ್ನು ಸಾಕ್ಷಿದಾರರಾಗಿ ವಿಚಾರಿಸಲಾಗಿತ್ತು. ಸಾಕ್ಷಿದಾರರು ನುಡಿದ ಸಾಕ್ಷವನ್ನು ಪರಿಗಣಿಸಿ ಆರೋಪಿಯೇ ಕೊಲೆ ಮಾಡಿರುವುದನ್ನು ರುಜುವಾತಪಡಿಸಿರುವುದಾಗಿ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ತೀರ್ಪು ನೀಡಿದರು.

ಕೊಲೆ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 10,000 ರೂ. ದಂಡ, ಅಕ್ರಮ ಪ್ರವೇಶ ಮಾಡಿರುವುದಕ್ಕೆ 1 ತಿಂಗಳು ಸಜೆ ಮತ್ತು 200 ರೂ. ದಂಡ, ಗಣೇಶ ಪೂಜಾರಿ ಅವರಿಗೆ ಹಲ್ಲೆ ನಡೆಸಿರುವುದಕ್ಕೆ 6 ತಿಂಗಳು ಶಿಕ್ಷೆ ವಿಧಿಸಿ ಹಾಗೂ ಮೃತ ರಂಜಿತ್ ಅವರ ತಂದೆಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News