ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾರನ್ನು ಚುನಾವಣಾ ಕಣಕ್ಕಿಳಿಸಿದ ಬಿಜೆಪಿ

Update: 2021-03-06 15:17 GMT

ಕೋಲ್ಕತಾ: ಕಳೆದ ತಿಂಗಳು ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾಗೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಮೊಯ್ನಾ ವಿಧಾನಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಶನಿವಾರ ಘೋಷಿಸಿದೆ.

ದಿಂಡಾ ಅವರು ಕೋಲ್ಕತಾದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿಯನ್ನು ಸೇರಿದ್ದರು. ಆ ನಂತರ ನಡೆದ ಬಿಜೆಪಿ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದರು.

ಓರ್ವ ಉತ್ತಮ ಬೌಲರ್ ಆಗಿದ್ದ ದಿಂಡಾ ಇತ್ತೀಚೆಗೆ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರು. 13 ಏಕದಿನ ಹಾಗೂ 9 ಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಕ್ರಮವಾಗಿ 12 ಹಾಗೂ 17 ವಿಕೆಟ್ ಗಳನ್ನು ಕಬಳಿಸಿದ್ದರು.

ದಿಂಡಾ ಅವರ ಸಹ ಆಟಗಾರ ಮನೋಜ್ ತಿವಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರಿದ ದಿನದಂದೇ ದಿಂಡಾ ಬಿಜೆಪಿಗೆ ಸೇರಿದ್ದರು.

ಮೊಯ್ನಾ ಕ್ಷೇತ್ರವನ್ನು ತೃಣಮೂಲ ಕಾಂಗ್ರೆಸ್ ನ ಸಂಗ್ರಾಮ್  ಕುಮಾರ್ ಡೋಲಾ ಪ್ರತಿನಿಧಿಸುತ್ತಿದ್ದು, 2016ರ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಮಾಣಿಕ್ ಭೌಮಿಕ್ ರನ್ನು 12,000  ಮತಗಳಿಂದ ಸೋಲಿಸಿದ್ದರು. ಸಂಗ್ರಾಮ್ ಈ ಬಾರಿ ಟಿಎಂಸಿಯಿಂದ ಮತ್ತೊಮ್ಮೆ ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿ ಮಾ.27ರಿಂದ ಆರಂಭವಾಗಲಿರುವ ಪ.ಬಂಗಾಳ ಚುನಾವಣೆಗೆ 57 ಅಭ್ಯರ್ಥಿಗಳಿರುವ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಸುವೇಂದು ಅಧಿಕಾರಿ ನಂದಿಗ್ರಾಮ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News