​ಭಾರತೀಯ ಪ್ರಯಾಣಿಕನ ದಾಂಧಲೆ: ಫ್ರಾನ್ಸ್ ವಿಮಾನ ತುರ್ತು ಭೂಸ್ಪರ್ಶ

Update: 2021-03-06 17:21 GMT
ಸಾಂದರ್ಭಿಕ ಚಿತ್ರ

 ಸೋಫಿಯಾ,ಮಾ.6: ಭಾರತೀಯ ಪ್ರಯಾಣಿಕನೊಬ್ಬ ದಾಂಧಲೆ ನಡೆಸಿದ್ದರಿಂದ ಪ್ಯಾರಿಸ್ ನಿಂದ ಹೊಸದಿಲ್ಲಿಗೆ ಪ್ರಯಾಣಿಸುತ್ತಿದ್ದ ಏರ್ ಫ್ರಾನ್ಸ್ ವಿಮಾನವು, ಬಲ್ಗೇರಿಯ ರಾಜಧಾನಿ ಸೋಫಿಯಾದ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತೆಂದು ಬಲ್ಗೇರಿಯದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ವಿಮಾನವು ಪ್ಯಾರಿಸ್ ನಿಂದ ಹಾರಾಟವನ್ನು ಆರಂಭಿಸುತ್ತಿದ್ದಂತೆಯೇ, ಭಾರತೀಯ ಪೌರನೆನ್ನಲಾದ ಪ್ರಯಾಣಿಕನೊಬ್ಬ ಇತರ ಪ್ರಯಾಣಿಕರ ಜೊತೆ ಜಗಳವಾಡತೊಡಗಿದ ಮತ್ತು ವಿಮಾನದ ಪರಿಚಾರಕರೊಬ್ಬರ ಮೇಲೆ ಹಲ್ಲೆ ನಡೆಸಿದ ಹಾಗೂ ಕಾಕ್ ಪಿಟ್ ನ ಬಾಗಿಲನ್ನು ಬಡಿಯತೊಡಗಿದ ಎಂದು ರಾಷ್ಟ್ರೀಯ ತನಿಖಾ ಏಜೆನ್ಸಿಯ ಅಧಿಕಾರಿ ಇವೈಲೊ ಆ್ಯಂಗೆಲೊವ್ ತಿಳಿಸಿದ್ದಾರೆ.
 
ಪ್ರಯಾಣಿಕ ತನ್ನ ಆಕ್ರಮಣಕಾರಿ ವರ್ತನೆಯನ್ನು ನಿಲ್ಲಿಸದೆ ಇದ್ದಾಗ, ಫ್ಲೈಟ್ ಕಮಾಂಡರ್ ಸೋಫಿಯಾದಲ್ಲಿ ವಿಮಾನವನ್ನು ತುರ್ತಾಗಿ ತಿಳಿಸಿದರು. ಕಿಡಿಗೇಡಿ ಪ್ರಯಾಣಿಕನನ್ನು ವಿಮಾನದಿಂದ ಹೊರಗೊಯ್ಯಲಾಯಿತು. ಆನಂತರ ವಿಮಾನವು ದಿಲ್ಲಿಗೆ ತನ್ನ ಪ್ರಯಾಣವನ್ನು ಪುನಾರಂಭಿಸಿತು.
ಆರೋಪಿ ಪ್ರಯಾಣಿಕನ ವಿರುದ್ಧ ವಿಮಾನದ ಸುರಕ್ಷತೆಗೆ ಅಪಾಯವೊಡ್ಡಿದ ಆರೋಪವನ್ನು ಹೊರಿಸಲಾಗಿದೆ. ಒಂದು ವೇಳೆ ಆತನ ದೋಷಿತ್ವ ಸಾಬೀತಾದಲ್ಲಿ 10 ವರ್ಷಗಳವರೆಗೂ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.
ಪ್ರಯಾಣಿಕನ ವರ್ತನೆ ಹಾಗೂ ಉದ್ದೇಶದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಮತ್ತು ಆತನ ವರ್ತನೆಗೆ ಈವರೆಗೆ ಯಾವುದೇ ಯೋಗ್ಯ ಕಾರಣ ಪತ್ತೆಯಾಗಿಲ್ಲ ಎಂದು ಆ್ಯಂಗೆಲೊವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News