​ದೇಶದಲ್ಲಿ 2 ತಿಂಗಳಲ್ಲೇ ಗರಿಷ್ಠ 18,700 ಕೋವಿಡ್ ಪ್ರಕರಣ ದಾಖಲು

Update: 2021-03-07 04:02 GMT

ಹೊಸದಿಲ್ಲಿ : ದೇಶದಲ್ಲಿ ದೈನಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರುತ್ತಿದ್ದು, ಶನಿವಾರ ಕಳೆದ 59 ದಿನಗಳಲ್ಲೇ ಗರಿಷ್ಠ ಅಂದರೆ 18,700 ಹೊಸ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಸತತ ಎರಡನೇ ದಿನ 10 ಸಾವಿರಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ. ಎರಡು ದಿನಗಳ ಕಾಲ ನೂರರ ಮೇಲಿದ್ದ ಸೋಂಕಿತರ ಸಾವಿನ ಸಂಖ್ಯೆ ಶನಿವಾರ 99ಕ್ಕೆ ಇಳಿದಿದೆ.

ಶನಿವಾರ ದೇಶದಲ್ಲಿ 18,765 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಜನವರು 6ರ ಬಳಿಕ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಜ.28ರಂದು 18,894 ಪ್ರಕರಣಗಳು ವರದಿಯಾಗಿದ್ದರೂ, ಈ ಪೈಕಿ 6 ಸಾವಿರ ಪ್ರಕರಣಗಳು ಛತ್ತೀಸ್‌ಗಢದಿಂದ ವರದಿಯಾದ ಹಳೆ ಪ್ರಕರಣಗಳು. ಶುಕ್ರವಾರ ದೇಶದಲ್ಲಿ 18,307 ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಇದರೊಂದಿಗೆ ಭಾರತದಲ್ಲಿ ಏಳು ದಿನಗಳ ದೈನಿಕ ಸರಾಸರಿ ಸತತ 20ನೇ ದಿನವೂ ಏರಿಕೆ ಕಂಡಿದ್ದು, 16311 ಆಗಿದೆ. ಫೆಬ್ರುವರಿ 14ರಿಂದೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಐದು ತಿಂಗಳ ಇಳಿಕೆ ಬಳಿಕ ದೀಢೀರ್ ಏರಿಕೆ ಕಂಡುಬಂದಿದ್ದು, ಸರಾಸರಿಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ.

ಮಹಾರಾಷ್ಟ್ರದಲ್ಲಿ ಸತತ ಎರಡನೇ ದಿನ 10 ಸಾವಿರಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ. ಶನಿವಾರ 10187 ಪ್ರಕರಣಗಳು ದೃಢಪಟ್ಟಿವೆ. ಶುಕ್ರವಾರ 10216 ಪ್ರಕರಣ ಬೆಳಕಿಗೆ ಬಂದಿತ್ತು. ಪುಣೆ ಜಿಲ್ಲೆಯೊಂದರಲ್ಲೇ 1925 ಪ್ರಕರಣಗಳು ವರದಿಯಾಗಿವೆ. ನಾಗ್ಪುರದಲ್ಲಿ 1217, ಮುಂಬೈನಲ್ಲಿ 1188 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 47 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕೇರಳದಲ್ಲಿ 2791 ಹೊಸ ಪ್ರಕರಣಗಳು ವರದಿಯಾಗಿದ್ದು, ಪಂಜಾಬ್‌ನಲ್ಲಿ 2020ರ ಅಕ್ಟೋಬರ್ 1ರ ಬಳಿಕ ಗರಿಷ್ಠ ಅಂದರೆ 1179 ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News