ಸಂಸದ ಅನಂತ ಕುಮಾರ್ ಹೆಗಡೆಗೆ ಶಸ್ತ್ರ‌ ಚಿಕಿತ್ಸೆ: ದೀರ್ಘಾವಧಿ ವಿಶ್ರಾಂತಿಗಾಗಿ ವೈದ್ಯರ ಸಲಹೆ

Update: 2021-03-07 06:04 GMT

ಶಿರಸಿ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತ ಕುಮಾರ ಹೆಗಡೆ ಗಂಭೀರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ಸಂಸದರು ಸಾರ್ವಜನಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕರ ಭೇಟಿಗೆ ಲಭ್ಯವಿರುವುದಿಲ್ಲ ಎಂದು ಅವರ ಆಪ್ತ ಕಾರ್ಯದರ್ಶಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸದ ಅನಂತ ಕುಮಾರ್ ಹೆಗಡೆ ಕಳೆದ ಹಲವು ವರ್ಷಗಳಿಂದ ತೀವ್ರವಾದ ಬೆನ್ನು ನೋವು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದು, ಈ ಕಾರಣದಿಂದಾಗಿ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ತಮ್ಮ ನಿರ್ಧಾರ ವ್ಯಕ್ತಪಡಿಸಿದ್ದರು. ಅದಾಗ್ಯೂ ಕಳೆದ ಲೋಕಸಭಾ ಚುನಾವಣೆಯ ನಂತರದಿಂದ ಹೆಚ್ಚಿನ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಂಪರ್ಕದಿಂದ ದೂರವಿರುತ್ತಿದ್ದರು. ಆದರೆ ಇತ್ತೀಚೆಗೆ ಕೆಲವು ತಿಂಗಳಿಂದ ಬೆನ್ನು ನೋವು ಮತ್ತು ಕಾಲು ನೋವು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ತಜ್ಞರು ತಕ್ಷಣವೇ ಸೂಕ್ತ ಕಾಲಿನ ಶಸ್ತ್ರ ಚಿಕಿತ್ಸೆಯನ್ನು ನಡೆಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದರು. ಇದೀಗ ಕೆಲವು ದಿನಗಳ ಹಿಂದೆ ನಡೆಸಿದ ಗಂಭೀರ ಶಸ್ತ್ರ ಚಿಕಿತ್ಸೆಯ ನಂತರ ಸಂಸದರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಹಾಗೂ ವೈದ್ಯರು ದೀರ್ಘಾವಧಿಯ ವಿಶ್ರಾಂತಿಯನ್ನು ಪಡೆಯಲು ಸೂಚಿಸಿರುವ ಹಿನ್ನೆಲೆಯಲ್ಲಿ ಪೂರ್ಣವಾಗಿ ಗುಣಮುಖರಾಗುವವರೆ ಸಂಸದರು ಸಾರ್ವಜನಿಕ ಕಾರ್ಯಕ್ರಮ ಹಾಗೂ ಭೇಟಿಗೆ ಲಭ್ಯವಿರುವುದಿಲ್ಲ ಎಂದು ಅವರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News