ತನಿಖಾ ಸಂಸ್ಥೆಗಳೆಲ್ಲಾ ಕೇಂದ್ರ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ: ಪಿಣರಾಯಿ ವಿಜಯನ್‌ ಆಕ್ರೋಶ

Update: 2021-03-07 07:07 GMT

ತಿರುವನಂತಪುರಂ: "ಏಪ್ರಿಲ್ 6 ರಂದು ಮತದಾನ ನಡೆಯಲಿರುವ ರಾಜ್ಯದ ಚುನಾವಣಾ ಪ್ರಚಾರವನ್ನು ಕೇಂದ್ರ ತನಿಖಾ ಸಂಸ್ಥೆಗಳು ವಹಿಸಿಕೊಂಡಿವೆ" ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.

"ನಾನು ಬಿಜೆಪಿ ಮತ್ತು ಕೇಂದ್ರ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ಏಜೆನ್ಸಿಗಳಿಗೆ ಹೇಳಬೇಕಾಗಿರುವುದು ಏನೆಂದರೆ, ನಾವು ನೀವು ವ್ಯವಹರಿಸಲು ಒಗ್ಗಿಕೊಂಡಿರುವ ಜನರಲ್ಲ. ನಾವು ವಿಭಿನ್ನರು. ನೀವು ಏನು ಮಾಡಿದರೂ ಈ ಮಣ್ಣು ನಮ್ಮನ್ನು ದೂಷಿಸುವುದಿಲ್ಲ. ನಮ್ಮ ಜೀವನವು ತೆರೆದ ಪುಸ್ತಕಗಳು, ಮತ್ತು ನೀವು ಅದನ್ನು ಶೀಘ್ರದಲ್ಲೇ ಅರಿತುಕೊಳ್ಳುವಿರಿ" ಎಂದು ಪಿಣರಾಯಿ ವಿಜಯನ್ ಹೇಳಿಕೆ ನೀಡಿದ್ದಾರೆ.

ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಮುಖ್ಯಮಂತ್ರಿ, ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಮತ್ತು ಕೆಲವು ಮಂತ್ರಿಗಳ ವಿರುದ್ಧ "ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ" ಎಂದು ಕಸ್ಟಮ್ಸ್ ಅಧಿಕಾರಿಗಳು ಕೇರಳ ಹೈಕೋರ್ಟ್ ಗೆ ತಿಳಿಸಿದ ಒಂದು ದಿನದ ಬಳಿಕ ಅವರು ಹೇಳಿಕೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಹತ್ತಿರವಿರುವ ಸಮಯದಲ್ಲಿ ರಾಜ್ಯ ಸರ್ಕಾರವನ್ನು ಮಾನಹಾನಿ ಮಾಡುವುದು ಮತ್ತು ಅವಮಾನಿಸುವುದು ಕಸ್ಟಮ್ಸ್ ಆಯುಕ್ತರ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

"ಕೇಂದ್ರ ತನಿಖಾ ಸಂಸ್ಥೆಗಳು ಈ ಚುನಾವಣಾ ಪ್ರಚಾರಗಳನ್ನು ಕೈಗೆತ್ತಿಕೊಂಡಿವೆ. ಚುನಾವಣಾ ಘೋಷಣೆಯ ನಂತರ, ಕೇಂದ್ರ ತನಿಖಾ ಏಜೆನ್ಸಿಗಳ ದಾಳಿಯ ತೀವ್ರತೆಯು ಹೆಚ್ಚಾಗಿದೆ. ಕ್ಯಾಬಿನೆಟ್ ಮಂತ್ರಿಗಳು ಮತ್ತು ಸ್ಪೀಕರ್ ರನ್ನು ಅವಮಾನಿಸುವ ಉದ್ದೇಶದಿಂದ ಕಸ್ಟಮ್ಸ್ ಆಯುಕ್ತರು ಚುನಾವಣಾ ಕಣಕ್ಕೆ ಪ್ರವೇಶಿಸಿದ್ದಾರೆ" ಎಂದು ವಿಜಯನ್ ಹೇಳಿದರು.

"ಚುನಾವಣೆಯ ಸಮಯದಲ್ಲಿ, ಏಜೆನ್ಸಿಗಳು ರಾಜಕೀಯ ಹೇಳಿಕೆಗಳನ್ನು ನೀಡುತ್ತಿವೆ. ಅಂತಹ ಏಜೆನ್ಸಿಗಳ ಈ ಕ್ರಮವು ವಿರೋಧ ಪಕ್ಷ ಮತ್ತು ಬಿಜೆಪಿಯ ಅನುಕೂಲಕ್ಕಾಗಿ ಮಾತ್ರವಾಗಿದೆ" ಎಂದು ಮುಖ್ಯಮಂತ್ರಿ ಹೇಳಿದರು. "ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ನಡೆಸಬಾರದು ಎಂದು ಬಯಸುತ್ತವೆ" ಎಂದು ಪಿಣರಾಯಿ ವಿಜಯನ್‌ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News