"ನನ್ನ ಸಾವಿಗೆ ಮೂರು ಕೃಷಿ ಕಾಯ್ದೆಗಳೇ ಕಾರಣ": ಡೆತ್‌ ನೋಟ್‌ ಬರೆದಿಟ್ಟು ಪ್ರತಿಭಟನಾ ಸ್ಥಳದಲ್ಲಿ ಆತ್ಮಹತ್ಯೆಗೈದ ರೈತ

Update: 2021-03-07 10:24 GMT

ಹೊಸದಿಲ್ಲಿ: ಟಿಕ್ರಿ ಗಡಿಯಲ್ಲಿನ ಪ್ರತಿಭಟನಾ ಸ್ಥಳದಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಹರಿಯಾಣದ ಹಿಸಾರ್ ಜಿಲ್ಲೆಯ 49 ವರ್ಷದ ರೈತ ಆತ್ಮಹತ್ಯೆಗೈದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕೇಂದ್ರದ ನೂತನ ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ಬೆಂಬಲಿಸಿದ್ದ ರೈತ, ಆತ್ಮಹತ್ಯೆ ಪತ್ರ(ಡೆತ್‌ ನೋಟ್) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

“ಮೃತ ರಾಜ್ ಬೀರ್ ಹಿಸಾರ್ ಜಿಲ್ಲೆಯ ಹಳ್ಳಿಯವರು. ಪ್ರತಿಭಟನೆ ನಡೆಸುತ್ತಿದ್ದ ಟಿಕ್ರಿ ಗಡಿಯ ಸುಮಾರು ಏಳು ಕಿ.ಮೀ ದೂರದಲ್ಲಿರುವ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ” ಎಂದು ಬಹದ್ದೂರ್‌‌ ಗರ್ ಸಿಟಿ ಪೊಲೀಸ್ ಠಾಣೆ ಎಸ್‌ಎಚ್‌ಒ ವಿಜಯ್ ಕುಮಾರ್ ತಿಳಿಸಿದ್ದಾಗಿ ವರದಿಗಳು ಉಲ್ಲೇಖಿಸಿವೆ.

ರಾಜ್ ಬೀರ್ ಬರೆದಿಟ್ಟ ಆತ್ಮಹತ್ಯೆ ಟಿಪ್ಪಣಿಯಲ್ಲಿ, "ನನ್ನ ಸಾವಿಗೆ ಸರಕಾರವು ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳೇ ಕಾರಣವಾಗಿವೆ. ನಾನು ಸತ್ತ ಬಳಿಕವಾದರೂ ಸರಕಾರ ಈ ಕಾಯ್ದೆಗಳನ್ನು ಹಿಂದೆಗೆದು ರೈತರಿಗೆ ಸಹಾಯ ಮಾಡಬೇಕು" ಎಂದು ಬರೆದಿದ್ದಾಗಿ ವರದಿಗಳು ತಿಳಿಸಿವೆ.

ಕಳೆದ ತಿಂಗಳು, ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ಬೆಂಬಲಿಸುತ್ತಿದ್ದ ಹರಿಯಾಣದ ಜಿಂದ್‌ನ ರೈತ ಕೂಡ ಟಿಕ್ರಿ ಗಡಿ ಪ್ರತಿಭಟನಾ ಸ್ಥಳದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಮರದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾಗಿ ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News