ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ : ಜಯಪ್ರಕಾಶ್ ಹೆಗ್ಡೆ

Update: 2021-03-07 11:52 GMT

ಮಂಗಳೂರು, ಮಾ.7: ಗ್ರಾಮೀಣ ಭಾಗದ ಜನರ ಮಧ್ಯೆ ಬೆರೆತುಕೊಂಡು ಕೆಲಸ ಮಾಡುವ ಜನಪ್ರತಿನಿಧಿಗಳು ತನ್ನ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಗ್ರಾಪಂಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಸ್ಯರು, ಉಪಾಧ್ಯಕ್ಷರು, ಅಧ್ಯಕ್ಷರ ಸಹಿತ ಸುಮಾರು 800ಕ್ಕೂ ಅಧಿಕ ಜನಪ್ರತಿನಿಧಿಗಳಿಗೆ ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ರವಿವಾರ ನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣಗೈದರು.

ಕೆಲವು ಗ್ರಾಮಗಳಲ್ಲಿ ‘ಭಯಂಕರ ಪ್ರಾಮಾಣಿಕ’ ಅಧಿಕಾರಿಗಳಿರುತ್ತಾರೆ. ಜನರ ಕೆಲಸ ಮಾಡಿಕೊಡಲು ಕಾನೂನಿನ ಅಡ್ಡಿ, ತೊಡಕುಗಳ ಬಗ್ಗೆ ಹೇಳಿ ಆತಂಕ ವ್ಯಕ್ತಪಡಿಸುತ್ತಾರೆ. ಅಂತಹವರನ್ನು ಪ್ರಶ್ನಿಸಿ ಕಾನೂನಿನ ಇತಿಮಿತಿಯೊಳಗೆ ಕೆಲಸ ಮಾಡಿಕೊಡಲು ಶ್ರಮಿಸಬೇಕು. ಜನಪ್ರತಿನಿಧಿಗಳಾದ ಬಳಿಕ ಸಮಾಜದ ಎಲ್ಲ ಜನರ ಪ್ರತಿನಿಧಿ ಎಂಬ ಪ್ರಜ್ಞೆ ಸದಾ ಇರಬೇಕು. ಹಾಗಾಗಿ ಸಮುದಾಯದ ಪ್ರತಿನಿಧಿಗಳಾಗದೆ ಸಮಾಜದ ಪ್ರತಿನಿಧಿಯಾಗಿ ಸೇವೆ ಸಲ್ಲಿಸಬೇಕು. ಜನಪ್ರತಿನಿಧಿಯಾಗಿರುವುದು ಸಾರ್ಥಕ ಎಂಬ ಭಾವನೆ ತಮ್ಮೆಳಗೆ ಮೂಡುವಂತಹ ಜನಪರ ಕೆಲಸ ಮಾಡಲು ಕಟಿಬದ್ಧರಾಗಬೇಕು ಎಂದು ಜಯಪ್ರಕಾಶ್ ಹೆಗ್ಡೆ ಸಲಹೆ ನೀಡಿದರು.

ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಬಂಟ ಸಮಾಜದ 800 ಪ್ರತಿನಿಧಿಗಳು ಕೇವಲ ಸ್ವಸಮಾಜದ ಮತದಾರರ ಮತದಿಂದ ಗೆಲುವು ಪಡೆದವರಲ್ಲ. ತಮ್ಮ ಗೆಲುವಿಗೆ ಎಲ್ಲಾ ಸಮಾಜದ ಮತದಾರರ ಶ್ರಮವಿದೆ. ಹಾಗಾಗಿ ಅಭಿವೃದ್ಧಿಯಲ್ಲಿ ಜಾತಿ, ಮತ ಬೇಡ. ನಮ್ಮ ಹಿರಿಯರು ಸೌಹಾರ್ದ ಸಮಾಜ ಕಟ್ಟಲು ಪ್ರಯತ್ನಿಸಿದವರು. ಸಮಾಜದಲ್ಲಿ ಶ್ರೀಮಂತರಿದ್ದರೂ ಕೂಡ ಸಾವಿರಾರು ಮಂದಿ ಬಡವರಿದ್ದಾರೆ. ಜನರ ಕೆಲಸ ಮಾಡಿಸಿಕೊಡುವುದರೊಂದಿಗೆ ಸಮಾಜದ ಬಡವರ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ. ಗೆದ್ದ ಬಳಿಕ ಸಮಾಜ, ಸಮುದಾಯವನ್ನು ಮರೆತು ಬಿಡುವುದು ಒಳ್ಳೆಯ ಲಕ್ಷಣವಲ್ಲ. ಮೀಸಲಾತಿಗೆ ಸಂಬಂಧಿಸಿದಂತೆ ಸಂಘವು ಬಂಟ ಸಮಾಜಕ್ಕೆ ಸೇರಿದ ಜನಪ್ರತಿನಿಧಿಗಳ ಬಳಿ ತೆರಳಿ ಅಹವಾಲು ಸಲ್ಲಿಸಿದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷದಿಂದ ಬಂಟ ಸಮಾಜದ ಅದೆಷ್ಟೋ ಮಂದಿಗೆ ಅರ್ಹತೆ ಇದ್ದರೂ ಕೂಡ ಸರಕಾರಿ ಉದ್ಯೋಗ ಪಡೆಯಲು ಸಾಧ್ಯವಾಗಲಿಲ್ಲ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಶೆಟ್ಟಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೆಡಿ, ಅಭಿನಂದನಾ ಸಮಿತಿಯ ಸಂಚಾಲಕರಾದ ಉಲ್ಲಾಸ್ ಆರ್. ಶೆಟ್ಟಿ, ದಿವಾಕರ ಸಾಮಾನಿ ಉಪಸ್ಥಿತರಿದ್ದರು.

ರಾಮಕೃಷ್ಣ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪುರುಷೋತ್ತಮ ಭಂಡಾರಿ ಮತ್ತು ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಎ. ಹೇಮನಾಥ ಶೆಟ್ಟಿ ಕಾವು ವಂದಿಸಿದರು. ಅಭಿಷೇಕ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಕೋಡಿಯಾಲ್ ಬೈಲ್ ಅಭಿನಂದನಾ ಕಾರ್ಯಕ್ರಮ ನಿರ್ವಹಿಸಿದರು. ಮೈಮ್‌ದಾಸ್ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮಾಹಿತಿ-ಸಂವಾದ: ಮೀಸಲಾತಿಯ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲ. ಕೆಲವರಿಗೆ ತಮ್ಮ ಸಮುದಾಯ ಹಿಂದುಳಿದ ವರ್ಗಗಳ ಆಯೋಗದ ಪಟ್ಟಿಯಲ್ಲಿದೆ ಎಂಬುದೂ ಗೊತ್ತಿಲ್ಲ. ಇನ್ನು ಕೆಲವರಿಗೆ ಆ ಪಟ್ಟಿಯಲ್ಲಿ ಸೇರುವ ಅರ್ಹತೆ ಇದ್ದರೂ ಕೂಡ ಪಟ್ಟಿಯಲ್ಲಿ ಸೇರಿಲ್ಲ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ. ಸರಕಾರಿ ಉದ್ಯೋಗ ಪಡೆಯಲು ಮೀಸಲಾತಿ ಬೇಕೇಬೇಕು. ಸಾಮಾಜಿಕ ಆರ್ಥಿಕ ಸ್ಥಿತಿಗತಿ ಮಾತ್ರವಲ್ಲ, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯೂ ಆಗಬೇಕಿದೆ. ಕೇಂದ್ರ ಸರಕಾರದ ‘ಇಡಬ್ಲುಎಸ್’ನಡಿ ಶೇ.10 ಮೀಸಲಾತಿ ಇದೆ. ಅದನ್ನು ಪಡೆಯುವ ಸಲುವಾಗಿಯಾದರೂ ಕೂಡ ಸಾಮಾಜಿಕ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ, ಅಧ್ಯಯನ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಆಯೋಗವು ಮಾಹಿತಿ ಸಂವಾದ ಕಾರ್ಯಕ್ರಮ ನಡೆಸಲಿದೆ.

- ಕೆ.ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಬಂಟ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಆರೋಗ್ಯಕ್ಕೆ ಸಂಬಂಧಿಸಿ ‘ಬಾಂಧವ್ಯ’ ಎಂಬ ಹೆಸರಿನ ಮೂಲಕ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಪ್ರತೀ 5 ಗ್ರಾಮಗಳ ಬಂಟ ಸಮಾಜದ ಜನರನ್ನು ಸೇರಿಸಿ ಬಂಟರ ಗ್ರಾಮಸಭೆ ನಡೆಸುವ ಮೂಲಕ ಬಲಿಷ್ಠ ಸಮಾಜ ಕಟ್ಟಲು ಶ್ರಮಿಸಲಾಗುವುದು.

- ಮಾಲಾಡಿ ಅಜಿತ್ ಕುಮಾರ್ ರೈ ಅಧ್ಯಕ್ಷರು ಬಂಟರ ಯಾನೆ ನಾಡವರ ಮಾತೃ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News