ನಾಲ್ಕು ಬಾರಿ ಪಕ್ಷ ಬದಲಾಯಿಸಿರುವ ಮಿಥುನ್‌ ಚಕ್ರವರ್ತಿ ಈ ಹಿಂದೆ ನಕ್ಸಲೈಟ್‌ ಆಗಿದ್ದವರು: ಟಿಎಂಸಿ ಸಂಸದ

Update: 2021-03-07 15:02 GMT

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷಗಳ ಮಧ್ಯೆ ವಾಗ್ಯುದ್ಧಗಳು ನಡೆಯುತ್ತಿವೆ. ಇಂದು ಕೋಲ್ಕತ್ತಾದಲ್ಲಿ ಬಿಜೆಪಿಯು ಬೃಹತ್‌ ರ್ಯಾಲಿ ನಡೆಸಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದು, ಈ ವೇಳೆ ಬಾಲಿವುಡ್‌ ನ ಖ್ಯಾತ ನಟ ಮಿಥುನ್‌ ಚಕ್ರವರ್ತಿ ಬಿಜೆಪಿ ಸೇರಿದ್ದರು. ಈ ಕುರಿತಾದಂತೆ ಇದೀಗ ಟಿಎಂಸಿ ಸಂಸದ ಸುಗತ ರಾಯ್‌, ಮಿಥುನ್‌ ಚಕ್ರವರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಮಿಥುನ್‌ ಚಕ್ರವರ್ತಿ ಇಂದಿನ ಸ್ಟಾರ್‌ ಏನಲ್ಲ. ಅವರು ಕಳೆದ ದಿನಗಳ ಸ್ಟಾರ್‌ ಅಷ್ಟೇ. ಅವರಿಂದ ಯಾವ ಪ್ರಭಾವವೂ ಉಂಟಾಗುವುದಿಲ್ಲ. ಅವರು ನಾಲ್ಕು ಬಾರಿ ಪಕ್ಷ ಬದಲಾವಣೆ ಮಾಡಿದ್ದಾರೆ. ಅವರು ನಿಜವಾಗಿ ಓರ್ವ ನಕ್ಸಲೈಟ್‌ ಆಗಿದ್ದವರು. ಬಳಿಕ ಸಿಪಿಎಂ ಪಕ್ಷ ಸೇರಿದರು. ಆಮೇಲೆ ಟಿಎಂಸಿ ಸೇರಿದ ಬಳಿಕ ಅವರನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಲಾಯಿತು" ಎಂದು ಸುಗತ ರಾಯ್‌ ಹೇಳಿಕೆ ನೀಡಿದ್ದಾಗಿ ANI ಸುದ್ದಿಸಂಸ್ಥೆ ವರದಿ ಮಾಡಿದೆ.

"ಬಿಜೆಪಿ ಮಿಥುನ್‌ ಚಕ್ರವರ್ತಿಯನ್ನು ಬೆದರಿಸುವ ಮೂಲಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ.  ಈಡಿಯನ್ನು ತೋರಿಸಿ ಭಯಪಡಿಸಲಾಯಿತು. ಅವರು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ. ಅವರಿಗೆ ವಿಶ್ವಾಸಾರ್ಹತೆ, ಗೌರವ, ಜನರ ಮಧ್ಯೆ ಪ್ರಭಾವ ಯಾವುದೂ ಇಲ್ಲ" ಎಂದು ಸುಗತ ರಾಯ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News