ಅಶ್ಲೀಲ ಸಿಡಿ ಬಿಡುಗಡೆ ಹಿಂದೆ ಕಾಂಗ್ರೆಸ್ ಷಡ್ಯಂತರ ಇಲ್ಲ : ಧ್ರುವನಾರಾಯಣ

Update: 2021-03-07 13:04 GMT

ಉಡುಪಿ, ಮಾ.7: ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣದ ಹಿಂದೆ ಕಾಂಗ್ರೆಸ್ ಪಕ್ಷದ ಯಾವುದೇ ಷಡ್ಯಂತರ ಇಲ್ಲ. ಅಂತಹದರಲ್ಲಿ ನಾವು ಯಾವತ್ತೂ ಗುರುತಿಸಿಕೊಂಡವರಲ್ಲ. ನಾವು ಅಭಿವೃದ್ಧಿಯೇ ಮಾನದಂಡ ಎಂಬ ನಿಟ್ಟಿನಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಆರ್.ಧ್ರುವನಾರಾಯಣ ಹೇಳಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ ರವಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಾಜ್ಯ ಸರಕಾರ ಜನರಿಗೆ ಉತ್ತಮ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮಂತ್ರಿಗಳ ಮಧ್ಯೆ ಹೊಂದಾಣಿಕೆ, ಸಮನ್ವಯತೆ ಇಲ್ಲವಾಗಿದೆ. ಅಶ್ಲೀಲ ಸಿಡಿ ಬಿಡುಗಡೆ ಮೂಲಕ ರಾಜ್ಯದ ಜನತೆ ತಲೆ ತಗ್ಗಿಸುವ ವಾತಾ ವರಣ ನಿರ್ಮಾಣವಾಗಿದೆ. ಬಸವಣ್ಣ, ಕುವೆಂಪುರ ನಮ್ಮ ನಾಡಿನಲ್ಲಿ ಇಂತಹ ಮಂತ್ರಿಗಳಿರುವುಗು ನಾಚಿಕೆಗೇಡು ಎಂದು ಟೀಕಿಸಿದರು.

ಇದೇ ರೀತಿಯ ಪ್ರಕರಣಗಳು ಮುಂದೆ ಬಯಲಿಗೆ ಬರಬಾರದು ಎಂಬು ದಾಗಿ ಆರು ಮಂದಿ ಸಚಿವರು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿ ದ್ದಾರೆ. ಕುಂಬಳ ಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ ಸ್ಥಿತಿ ಈ ಆರು ಮಂದಿ ಸಚಿವರದ್ದಾಗಿದೆ ಎಂದು ಅವರು ದೂರಿದರು.

ನಮ್ಮ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಖ್ಯ ಗುರಿಯಾಗಿದೆ. ಎಸ್‌ಡಿಪಿಐಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹಾನಿ ಯಾಗಿಲ್ಲ ಎಂದು ಅವರು ಪ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕ ದಲ್ಲಿ ಭಾರತ 131ನೆ ಸ್ಥಾನದಲ್ಲಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡಿಗೆ ಕೋಟ್ಯಂತರ ಹಣ ನೀಡಲಾಗಿದೆ. ಆದರೆ ಕರ್ನಾಟಕಕ್ಕೆ ಯಾವುದೇ ಅನುದಾನ ನೀಡಿಲ್ಲ. ಆದರೂ ರಾಜ್ಯದ 25 ಮಂದಿ ಬಿಜೆಪಿ ಸಂಸದರು ಪ್ರಶ್ನೆ ಮಾಡುತ್ತಿಲ್ಲ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ಎಂ.ಎ.ಗಫೂರ್, ಮಂಗಳೂರು ಕಾರ್ಪೊರೇಟರ್ ನವೀನ್ ಡಿಸೋಜ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಉಪಸ್ಥಿತರಿದ್ದರು.

ಪ್ರಗತಿಪರ ಜಿಲ್ಲೆಯಲ್ಲಿ ಕೋಮುವಾದಿಗಳಿಗೆ ಬೆಂಬಲ ಆಶ್ಚರ್ಯ!

ಈ ಹಿಂದಿನ ಸಿದ್ಧರಾಮಯ್ಯ ಸರಕಾರ ಯಾವುದೇ ಭ್ರಷ್ಟಾಚಾರ ಇಲ್ಲದೆ ಪ್ರಾಮಾಣಿಕ ಕೆಲಸ ಮಾಡಿದೆ. 2008ರ ಐದು ವರ್ಷ ಬಿಜೆಪಿ ಆಡಳಿತದಲ್ಲಿ ರಾಜ್ಯ ಮೂರು ಮುಖ್ಯಮಂತ್ರಿಗಳನ್ನು ಕಂಡಿತ್ತು. ಸದನದಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವ ಮೂಲಕ ರಾಜ್ಯದ ಮಾನವನ್ನು ಬಿಜೆಪಿ ಯವರು ಹಾಜರು ಹಾಕಿದ್ದರು. ಆದರೂ ವಿದ್ಯಾವಂತ ಪ್ರಗತಿಪರ ಜಿಲ್ಲೆಯಾಗಿರುವ ಅವಿಭಿಜಿತ ದ.ಕ.ಜಿಲ್ಲೆಯಲ್ಲಿ ಪ್ರಗತಿಪರ ಧೋರಣೆ ಇರುವ ನಾಯಕರಿಗೆ ಹಿನ್ನಡೆಯಾಗುತ್ತಿರುವುದು ಮತ್ತು ಕೋಮುವಾದಿಗಳಿಗೆ ಈ ರೀತಿ ಯಾಕೆ ಬೆಂಬಲ ಕೊಡುತ್ತಿದ್ದಾರೆ ಎಂಬುದು ಅರ್ಥ ಆಗುತ್ತಿಲ್ಲ ಎಂದು ಧ್ರುವನಾರಾಯಣ ಖೇದ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News