​ಪತ್ರಿಕೆ ಓದಿಗೆ ಪರ್ಯಾಯ ಬೇರಿಲ್ಲ : ಪೊಲೀಸ್ ಆಯುಕ್ತ ಎನ್. ಶಶಿಕುಮಾರ್

Update: 2021-03-07 16:07 GMT

ಮಂಗಳೂರು, ಮಾ. 7: ಸಾಮಾಜಿಕ ಜಾಲತಾಣಗಳು, ಚಾನೆಲ್‌ಗಳು ಇಂದು ಅತಿಕ್ಷಿಪ್ರವಾಗಿ ಸುದ್ದಿ ಬಿತ್ತರಿಸುವ ಮಾಧ್ಯಮವಾಗಿ ಹೊರಹೊಮ್ಮಿದ್ದರೂ ಪತ್ರಿಕೆ ಓದಿಗೆ ಪರ್ಯಾಯ ಬೇರಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಭಿಪ್ರಾಯಿಸಿದ್ದಾರೆ.

ಅವರು ಇಂದು ಮಂಗಳೂರಿನ ಫುಟ್‌ಬಾಲ್ ಮೈದಾನದಲ್ಲಿ ದ.ಕ. ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ, ಸ್ವತಹ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವ ಮೂಲಕ ಕ್ರೀಡಾೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಪತ್ರಕರ್ತರು ಬಿಡುವಿಲ್ಲದ ಕೆಲಸದ ನಡುವೆಯೂ ಕ್ರೀಡಾಸ್ಫೂರ್ತಿ ಬೆಳೆಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದವರು ಹೇಳಿದರು.
ಏಷ್ಯನ್ ಪತ್ರಕರ್ತರ ಒಕ್ಕೂಟದ ಸಂಚಾಲಕ ಮದನ್ ಗೌಡ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳ ಪತ್ರಕರ್ತರ ಸಂಘಗಳ ಪೈಕಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಗ್ರ ಪಂಕ್ತಿಯಲ್ಲಿದೆ ಎಂದರು.

ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿ ಮಾತನಾಡಿ,  ಮಂಗಳೂರು ಸೌಹಾರ್ದತೆಯ ನೆಲ. ಇಲ್ಲಿನ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆ ಮಾದರಿಯಾಗಿದೆ ಎಂದು ಹೇಳಿದರು.

ಮುಂಬೈ ಕರ್ನಾಟಕ ಪತ್ರಕರ್ತರ ಸಂಘ ಅಧ್ಯಕ್ಷ ರೋನ್ಸ್ ಬಂಟ್ವಾಳ, ಜಿಲ್ಲಾ ಪತ್ರಕರ್ತರ ಸಂಧ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತ ವಿಜಯ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದು, ಮೇಯರ್ ಪ್ರೇಮಾನಂದ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಕೆನರಾ ಬ್ಯಾಂಕ್‌ನ ಜಿಎಂ ಯೋಗೀಶ್ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.

ಕ್ರಿಕೆಟ್ ಪಂದ್ಯಾಟದಲ್ಲಿ ಸುದ್ದಿ ಬಿಡುಗಡೆ ಪ್ರಥಮ, ವಾರ್ತಾಭಾರತಿ ರನ್ನರ್‌ಅಪ್

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾದ ಕ್ರಿಕೆಟ್ ಪಂದ್ಯಾಟದಲ್ಲಿ ಸುದ್ದಿ ಬಿಡುಗಡೆ ಪುತ್ತೂರು ತಂಡ ಪ್ರಥಮ ಹಾಗೂ ವಾರ್ತಾಭಾರತಿ ತಂಡ ರನ್ನರ್‌ಅಪ್ ಸ್ಥಾನ ಪಡೆಯಿತು.

11 ತಂಡಗಳು ಭಾಗವಹಿಸಿದ್ದ ಕ್ರಿಕೆಟ್ ಪಂದ್ಯಾಟ 4 ಓವರ್‌ಗಳ ಅಂಡರ್‌ಆರ್ಮ್ ಮಾದರಿಯಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News