ಮಾ. 23ರಂದು ಕಾಪು ಮಾರಿಗುಡಿ 'ಶಿಲಾ ಸೇವೆ' ಅರ್ಪಣಾ ಸಮಾರಂಭ

Update: 2021-03-07 16:22 GMT

ಕಾಪು : ಸುಮಾರು 35 ಕೋಟಿರ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಪು ಸಾವಿರ ಸೀಮಿಯೆ ಒಡತಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಶಿಲಾಮಯ ದೇಗುಲಕ್ಕೆ ಶಿಲಾ ಸೇವೆಯ ಮೂಲಕ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಮಾ. 23ರಂದು 'ಶಿಲಾ ಸೇವೆ' ಅರ್ಪಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ  ಈ ಬಗ್ಗೆ ಮಾಹಿತಿ ನೀಡಿದರು.

ಕಾಪು ಹೊಸ ಮಾರಿಗುಡಿ ದೇವಳವನ್ನು ಸಮಗ್ರ ಜೀರ್ಣೋದ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಅಭಿವೃದ್ಧಿ ಸಮಿತಿಯು ಅಮ್ಮನ ಭಕ್ತ ವೃಂದವನ್ನು ಕೂಡಿಕೊಂಡು ದೇವಸ್ಥಾನದ ಈಗಾಗಲೇ ಚಾಲನೆಯನ್ನು ನೀಡಿದೆ. 2019 ನೇ ಜ. 23 ರಂದು ಪೇಜಾವರ ಹಿರಿಯ ಶ್ರೀಗಳ ದಿವ್ಯ ಹಸ್ತದಿಂದ ಗಣ್ಯರೆಲ್ಲರ ಸಮ್ಮುಖದಲ್ಲಿ ನಿಧಿಕುಂಭ ಸ್ಥಾಪನೆ ಮಾಡಲಾಯಿತು. ಒಟ್ಟು ಸುಮಾರು 35 ಕೋಟಿ ಅಂದಾಜು ವೆಚ್ಚದಲ್ಲಿ 3 ಹಂತಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಮೊದಲನೇ ಹಂತದ ಸುಮಾರು 20 ಕೋಟಿಗಳ ಗರ್ಭಗುಡಿ, ಉಚ್ಛಂಗಿ ಗುಡಿ, ಸುತ್ತುಪೌಳಿ ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ನಡೆಯುತ್ತಿದೆ.

ಕೋರೋನದಿಂದ ಸ್ಥಗಿತಗೊಂಡ ಕಾಮಗಾರಿಗೆ ಚಾಲನೆ ನೀಡಿದ್ದು,  2 ಗುಡಿಗಳು ಹಿಲ್‍ಕಲ್ ಕೆಂಪು ಶಿಲೆಯಿಂದ ದ್ರಾವಿಡ, ಚಾಲುಕ್ಯ ಇತ್ಯಾದಿ ಶೈಲಿಯಿಂದ ಸುಂದರವಾಗಿ ಕೆತ್ತನೆ ಕೆಲಸಗಳು ನಡೆಯುತ್ತಿದೆ. ಮಾ. 23ರಂದು ಮಂಗಳವಾರ ಪುರ್ವಾಹ್ನ 9.59ರಿಂದ ನಿರಂತರ ಆಹೋರಾತ್ರಿ ಮತ್ತು ಮಾ. 24ರಂದು ಬುಧವಾರ ಸಂಜೆ 6ಗಂಟೆಯ ತನಕ ಶಿಲಾಮಯ ಸಮರ್ಪಣಾ ಸಮಾರಂಭ ನಡೆಯಲಿದೆ. ನಿರ್ಮಾಣಗೊಳ್ಳುತ್ತಿರುವ ಅಮ್ಮನ ಶಿಲಾಮಯ ಗರ್ಭಗುಡಿಯಲ್ಲಿ ಪುಷ್ಟವನ್ನು ಅರ್ಪಿಸುವ ಮೂಲಕ ತಮ್ಮ ಶಿಲಾಸೇವೆಯನ್ನು ನೀಡಬೇಕಾಗಿ ಭಕ್ತರಲ್ಲಿ ಮನವಿ ಮಾಡಿದರು.

ಒಂದು ಶಿಲೆಗೆ - ರೂ. 999, 9 ಶಿಲೆಗೆ - ರೂ.9,999 ಹಾಗೂ 99 ಶಿಲೆಗೆ - ರೂ.99,999 ರಂತೆ ನಿಗದಿಪಡಿಸಲಾಗಿದೆ. ಈ ದೇಗುಲದಿಂದ ಕಾಪುವಿನ ಸಮಗ್ರ ಅಭಿವೃದ್ಧಿಯಾಗಲಿದ್ದು ಕಾಪು ಪ್ರವಾಸೋದ್ಯಮದ ಮುಖ್ಯ ಕೇಂದ್ರವಾಗಲಿದೆ. ಅಲ್ಲದೆ ಅನೇಕ ಜನೋಪಯೋಗಿ ಕಾರ್ಯಕ್ರಮ ಗಳಾದ ಆರೋಗ್ಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಬಗ್ಗೆಯೂ ಸಮಿತಿಯು ನಿರ್ಧರಿಸಿದೆ ಎಂದು ಅವರು ಹೇಳಿದರು.

ಶಾಸಕ ಲಾಲಾಜಿ ಆರ್ ಮೆಂಡನ್, ಅಧ್ಯಕ್ಷ ಕೆ ವಾಸುದೇವ ಶೆಟ್ಟಿ, ಕಾರ್ಯಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ , ಲೀಲಾಧರ್ ಶೆಟ್ಟಿ, ಶ್ರೀಕರ ಶೆಟ್ಟಿ ಕಲ್ಯ,  ಪ್ರವೀಣ್ ಪೂಜಾರಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News