ವಿಮಾ ಯೋಜನೆಯಲ್ಲಿ ಸದಸ್ಯರನ್ನಾಗಿಸಿ: ಲಾಲಾಜಿ ಮೆಂಡನ್

Update: 2021-03-07 16:27 GMT

ಕಾಪು : ಕೇಂದ್ರ ಸರ್ಕಾರದ ವಿಮಾ ಯೋಜನೆಯಲ್ಲಿ ಟೈಲರ್ಸ್ ಎಸೋಸಿಯೇಶನ್ ಸದಸ್ಯರನ್ನು ಕಡ್ಡಾಯವಾಗಿ ಒಳಪಡಿಸಲು ಕ್ರಮವಹಿಸಬೇಕು ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಸಲಹೆ ನೀಡಿದರು.

ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಕಾಪು ಕ್ಷೇತ್ರ ಸಮಿತಿ ಕಾಪು ಮಹಾದೇವಿ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಟೈಲರ್ಸ್ ಡೇ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು. ಪೂರಕ ಬಜೆಟ್‍ನಲ್ಲಿ ಟೈಲರ್ಸ್‍ಗಳ ಬೇಡಿಕೆಗಳನ್ನು ಸೇರ್ಪಡೆ ಮಾಡಿ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

21 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಟೈಲರ್ಸ್ ಎಸೋಸಿಯೇಶನ್ ರಾಜ್ಯದ 30 ಜಿಲ್ಲೆಗಳಲ್ಲಿ ಅಸಂಖ್ಯಾತ ಸದಸ್ಯರನ್ನು ಹೊಂದಿದೆ. ಅಸಂಘಟಿತ ಕಾರ್ಮಿಕರಾಗಿರುವ ಟೈಲರ್ಸ್‍ಗಳಿಗೆ ಸರ್ಕಾರ ಘೋಷಿಸಿರುವ ಭವಿಷ್ಯ ನಿಧಿ, ನಿವೃತ್ತಿ ವೇತನ ಸಹಿತ ಹಲವಾರು ಯೋಜನೆಗಳು ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ರಾಜ್ಯ ಸರ್ಕಾರದ ಕರೊನಾ ಸಂಕಷ್ಟ ಪರಿಹಾರ ನಿಧಿ ಯಾವೊಬ್ಬ ಟೈಲರ್ಸ್‍ಗಳಿಗೂ ದೊರೆಯಲಿಲ್ಲ. ಶೇ.95 ರಷ್ಟು ಟೈಲರ್ಸ್‍ಗಳು ಗ್ರಾಮಾಂತರ ಪ್ರದೇಶದಲ್ಲಿ ವೃತ್ತಿ ಮಾಡುತ್ತಿದ್ದು, ಸಂಕಷ್ಟಕ್ಕೊಳಗಾಗಿದ್ದಾರೆ. ಶಾಲಾ ಸಮವಸ್ತ್ರಗಳನ್ನೂ ಹೊಲಿಯಲು ಬಂಡವಾಳಶಾಹಿಗಳಿಗೆ ನೀಡಲಾಗುತ್ತಿದೆ. ಸಾಮಾಜಿಕ ಅಭದ್ರತೆಯಿಂದ ವೃತ್ತಿಯಿಂದ ವಿಮುಖರಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಕೆಎಸ್‍ಟಿಎ ರಾಜ್ಯ ಸಮಿತಿ ಕೋಶಾಧಿಕಾರಿ ಅಬ್ದುಲ್ ಖಾದರ್ ಅಳಲು ತೋಡಿಕೊಂಡರು.

ಟೈಲರ್ಸ್ ಹಿರಿಯ ವೃತ್ತಿ ಬಾಂಧವರಾದ ಪಡುಬಿದ್ರಿ ವಲಯದ ಕೆ.ಎ. ಅಹಮದ್, ಹೇಮಾವತಿ, ಬೆಳ್ಮಣ್‍ನ ಗೋಪಾಲ್ ನಾಯ್ಕ್, ಉಮಾವತಿ, ಶಿರ್ವದ ಮಂಜುನಾಥ್ ಶೆಟ್ಟಿಗಾರ್, ಉಮಾವತಿ ಶೆಟ್ಟಿ, ಕಟಪಾಡಿಯ ಜಾನ್ ಕುಂದರ್, ಗಾಯತ್ರಿ, ಕಾಪುವಿನ ಕೃಷ್ಣಪ್ಪ ಹಾಗೂ ಮೀನಾಕ್ಷಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು  ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಕೆಎಸ್‍ಟಿಎ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಕೆ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಸಮಾಜ ಸೇವಕ ಲೀಲಾಧರ ಶೆಟ್ಟಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಕೇಶ್ ಕುಂಜೂರು, ಕೆಎಸ್‍ಟಿಎ ಉಡುಪಿ ಜಿಲ್ಲಾಧ್ಯಕ್ಷ ರಾಮಚಂದ್ರ, ಕೋಶಾಧಿಕಾರಿ ಸತೀಶ್ ಆರ್ ದೇವಾಡಿಗ, ಕಾಪು ಸಮಿತಿ ಮಾಜಿ ಅಧ್ಯಕ್ಷರಾದ ಶಂಕರ್ ಸೂಡ, ವಿಲಿಯಂ ಮಚಾದೋ ಶಿರ್ವ, ಆನಂದ ಪುತ್ರನ್ ಬೆಳ್ಮಣ್ ಉಪಸ್ಥಿತರಿದ್ದರು. ಕಾಪು ಸಮಿತಿ ಕಾರ್ಯದರ್ಶಿ ಅಮೃತಾಕ್ಷಿ ಶೆಟ್ಟಿ ಸ್ವಾಗತಿಸಿದರು. ಶಿವಣ್ಣ ಬಾಯರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News