ಪಾಕಿಸ್ತಾನ ಕ್ರಿಕೆಟ್‌ ತಂಡದ ವೇಗದ ಬೌಲರ್‌ ನೊಂದಿಗೆ ವಿವಾಹವಾಗಲಿರುವ ಶಾಹಿದ್ ಅಫ್ರಿದಿ ಪುತ್ರಿ

Update: 2021-03-07 16:40 GMT
photo: twitter

ಲಾಹೋರ್: ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿಯವರ ಹಿರಿಯ ಪುತ್ರಿ ಅಖ್ಸಾ ಅವರು ಪಾಕ್ ಕ್ರಿಕೆಟ್ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪಾಕಿಸ್ತಾನ ಮಾಧ್ಯಮಗಳಿಗೆ ಈ ವಿಚಾರವನ್ನು ದೃಢಪಡಿಸಿರುವ ಶಾಹೀನ್ ಅಫ್ರಿದಿಯ ತಂದೆ ಆಯಾಝ್ ಖಾನ್, ಎರಡೂ ಕುಟುಂಬಗಳು ಪರಸ್ಪರ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದರಿಂದ ಕುಟುಂಬವು ಈ ಪ್ರಸ್ತಾವವನ್ನು ಒಪ್ಪಿಕೊಂಡಿದೆ. ನಿಶ್ಚಿತಾರ್ಥ ಶೀಘ್ರವೇ ನಡೆಯಲಿದೆ ಎಂದು ಹೇಳಿದ್ದಾರೆ.

ಈ ಕುರಿತಾದಂತೆ ಶಾಹಿದ್‌ ಅಫ್ರಿದಿ ಟ್ವೀಟ್‌ ಮಾಡಿದ್ದು, "ಶಾಹೀನ್‌ ಕುಟುಂಬವು ನನ್ನ ಮಗಳಿಗಾಗಿ ನಮ್ಮೊಂದಿಗೆ ಮಾತುಕತೆ ನಡೆಸಿದೆ. ನಮ್ಮ ಕುಟುಂಬಗಳೆರಡೂ ಪರಸ್ಪರ ಸಂಬಂಧದಲ್ಲಿದ್ದೇವೆ. ಜೋಡಿಗಳನ್ನು ಸ್ವರ್ಗದಲ್ಲಿ ನಿಶ್ಚಯಿಸಲಾಗುತ್ತದೆ. ಅಲ್ಲಾಹು ಇಚ್ಛಿಸಿದರೆ ಈ ಜೋಡಿಗಳೂ ಪರಸ್ಪರ ಒಂದಾಗಲಿದೆ. ಶಾಹೀನ್‌ ಮೈದಾನದಲ್ಲೂ, ಫೀಲ್ಡ್‌ ನ ಆಚೆಗೂ ತನ್ನ ಯಶಸ್ಸನ್ನು ಮುಂದುವರಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಅಫ್ರಿದಿ ಟ್ವೀಟ್‌ ಮಾಡಿದ್ದಾರೆ.

ಶಾಹೀನ್ ಅಫ್ರಿದಿ ಹಾಗೂ ಶಾಹಿದ್ ಅಫ್ರಿದಿ ಇಬ್ಬರೂ ಕೂಡ ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್-2021ರಲ್ಲಿ ಒಟ್ಟಿಗೆ ಆಡಿದ್ದರು. ಶಾಹೀನ್ ಲಾಹೋರ್ ತಂಡದ ಪರ 4 ಪಂದ್ಯಗಳಲ್ಲಿ 9 ವಿಕೆಟ್ ಗಳನ್ನು ಪಡೆದಿದ್ದರೆ, ಶಾಹಿದ್ ಅಫ್ರಿದಿ ಮುಲ್ತಾನ್ ಸುಲ್ತಾನ್ ಪರ 5 ವಿಕೆಟ್ ಗಳನ್ನು ಪಡೆದಿದ್ದರು.

20ರ ಹರೆಯದ ಶಾಹೀನ್ ಅಫ್ರಿದಿ 2018ರಲ್ಲಿ ಪಾಕಿಸ್ತಾನದ ಪರ ಚೊಚ್ಚಲ ಪಂದ್ಯವನ್ನಾಡಿದ ಬಳಿಕ 15 ಟೆಸ್ಟ್, 22 ಏಕದಿನ ಹಾಗೂ 21 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ 48 ವಿಕೆಟ್ ಗಳನ್ನು ಪಡೆದಿರುವ ಶಾಹೀನ್ ಅವರು 50 ಓವರ್ ಗಳು ಹಾಗೂ 20 ಓವರ್ ಗಳ ಪಂದ್ಯದಲ್ಲಿ ಕ್ರಮವಾಗಿ 45 ಹಾಗೂ 24 ವಿಕೆಟ್ ಗಳನ್ನು ಕಬಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News