ಮೊಸುಲ್‌ಗೆ ಪೋಪ್ ಫ್ರಾನ್ಸಿಸ್ ಶಾಂತಿಯಾತ್ರೆ

Update: 2021-03-07 16:40 GMT

 ಮೊಸುಲ್,ಮಾ.7: ಇರಾಕ್‌ಗೆ ಐತಿಹಾಸಿಕ ಪ್ರವಾಸವನ್ನು ಕೈಗೊಂಡಿರುವ ಪೋಪ್ ಫ್ರಾನ್ಸಿಸ್ ಅವರು ರವಿವಾರ ಮೊಸುಲ್‌ನಲ್ಲಿರುವ ಐಸಿಸ್ ಉಗ್ರರ ದಾಳಿಯಿಂದ ಹಾನಿಗೀಡಾಗಿದ್ದ ಪುರಾತನವಾದ ಚರ್ಚ್ಗೆ ಭೇಟಿ ನೀಡಿದರು.

ಶಿಥಿಲವಾದ ಕಲ್ಲುಗೋಡೆಗಳ ಅಲ್-ತಾಹೆರಾ ಚರ್ಚ್‌ನ ಆವರಣದಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಇರಾಕ್ ಹಾಗೂ ಮಧ್ಯಪ್ರಾಚ್ಯದ ರಾಷ್ಟ್ರಗಳ ಕ್ರೈಸ್ತರು ತಮ್ಮ ತಾಯ್ನಾಡಿನಲ್ಲಿಯೇ ಬಾಳುವಂತೆ ಕರೆ ನೀಡಿದರು.

 ಯುದ್ಧದಿಂದ ಜರ್ಜರಿತವಾದ ಇರಾಕ್‌ನಿಂದ ಕ್ರೈಸ್ತರ ದುರಂತಮಯ ಪಲಾಯನವು ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ ಸಂಬಂಧಪಟ್ಟ ಸಮುದಾಯಕ್ಕೇ ಲೆಕ್ಕವಿಲ್ಲದಷ್ಟು ಹಾನಿಯುಂಟು ಮಾಡಿದೆ. ಅಷ್ಟೇ ಅಲ್ಲದೆ ಅವರು ತೊರೆದುಹೋಗಿರುವ ಸಮಾಜಕ್ಕೂ ನಷ್ಟವಾಗಿದೆ’’ ಎಂದರು.

  

ಐಸಿಸ್ ಉಗ್ರರ ದಾಳಿಯಿಂದಾಗಿ ಉತ್ತರ ಇರಾಕ್‌ನ ನಿನೆವೆಹ್ ಪ್ರಾಂತದಿಂದ ಸಾವಿರಾರು ಕ್ರೈಸ್ತರು ಪಲಾಯನಗೈದಿದ್ದರು. 2003ರಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ದಾಳಿ ನಡೆಸುವ ಮುನ್ನ ಇರಾಕ್ನಲ್ಲಿ 10.50 ಲಕ್ಷದಷ್ಟಿದ್ದ ಕ್ರೈಸ್ತರ ಸಂಖ್ಯೆ ಈಗ 4 ಲಕ್ಷಕ್ಕೆ ಕುಸಿದಿದೆ. ಪೋಪ್ ಆಗಮನದ ಹಿನ್ನೆಲೆಯಲ್ಲಿ ರವಿವಾರ ಭಾರೀ ಸಂಖ್ಯೆಯ ಇರಾಕಿ ಕ್ರೈಸ್ತರು ಅಲ್ ತಾಹೆರಾ ಚರ್ಚ್‌ನ ಆವರಣದಲ್ಲಿ ಜಮಾಯಿಸಿದ್ದರು. 2017ರಲ್ಲಿ ಐಸಿಸ್ ಉಗ್ರರ ವಿರುದ್ಧ ಇರಾಕಿ ಪಡೆಗಳು ನಡೆಸಿದ ಘರ್ಷಣೆಯ ಸಂದರ್ಭ ಚರ್ಚ್‌ನ ಮೇಲ್ಛಾವಣಿ ಕುಸಿದುಬಿದ್ದಿತ್ತು. ಪೋಪ್ ಭೇಟಿಯ ಹಿನ್ನೆಲೆಯಲ್ಲಿ ಮೊಸುಲ್‌ನಗರದಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಪೋಪ್ ಫ್ರಾನ್ಸಿಸ್ ಅವರ ಇರಾಕ್ ಭೇಟಿಯ, ಆ ದೇಶದಲ್ಲಿ ಕ್ಷೀಣಿಸುತ್ತಿರುವ ಕ್ರೈಸ್ತರ ಸಮುದಾಯದಲ್ಲಿ ಭರವಸೆಯನ್ನು ಮೂಡಿಸುವ ಹಾಗೂ ಇತರ ಧರ್ಮಗಳ ಜೊತೆ ಸೌಹಾರ್ದತೆಯನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದ ಶಾಂತಿಯಾತ್ರೆಯೆಂದು ಬಣ್ಣಿಸಲಾಗಿತ್ತು.

ಶನಿವಾರದಂದು ಪೋಪ್ ಫ್ರಾನ್ಸಿಸ್ ಅವರು ಇರಾಕ್‌ನ ಪ್ರಮುಖ ಶಿಯಾ ಮುಖಂಡ ಅಯಾತುಲ್ಲಾ ಅಲಿ ಸಿಸ್ತಾನಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News