ಟಿಬೆಟ್ ಗೆ ಚೀನಾದ ಬುಲೆಟ್ ರೈಲು ಸಂಚಾರ ಆರಂಭಕ್ಕೆ ಸಿದ್ಧತೆ

Update: 2021-03-07 16:50 GMT
ಸಾಂದರ್ಭಿಕ ಚಿತ್ರ

 ಬೀಜಿಂಗ್,ಮಾ.7: ಭಾರತದ ಅರುಣಾಚಲಪ್ರದೇಶದ ಗಡಿಗೆ ಹತ್ತಿರದಲ್ಲಿರುವ ಟಿಬೆಟ್‌ಗೆ ಚೀನಾವು ಬುಲೆಟ್ ರೈಲುಗಳ ಸಂಚಾರವನ್ನು ಈ ವರ್ಷದ ಜುಲೈಗೆ ಮುನ್ನ ಆರಂಭಿಸಲಿದೆಯೆಂದು ಹಿರಿಯ ಚೀನಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

 ಟಿಬೆಟ್‌ಗೆ ಬುಲೆಟ್ ರೈಲುಗಳ ಸಂಚಾರ ಆರಂಭಗೊಂಡಲ್ಲಿ ಚೀನಾದ ಎಲ್ಲಾ ಪ್ರಾಂತಗಳಿಗೂ ಅತ್ಯಂತ ವೇಗದ ರೈಲು ಸೇವೆಗಳು ದೊರೆತಂತಾಗಲಿದೆ.

 ಪೂರ್ವ ಟಿಬೆಟ್‌ನ ನಿಂಗಿಚಿ ನಗರ ಹಾಗೂ ಟಿಬೆಟ್ ರಾಜಧಾನಿ ಲಾಸಾವನ್ನು ಸಂಪರ್ಕಿಸುವ 435 ಕಿ.ಮೀ. ವಿಸ್ತೀರ್ಣದ ಬುಲೆಚ್ ರೈಲು ಮಾರ್ಗದ ನಿರ್ಮಾಣ ಕಾರ್ಯವು 2014ರಲ್ಲಿ ಆರಂಭಗೊಂಡಿತ್ತು. ಟಿಬೆಟ್‌ನಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿದ್ಯುತ್‌ಚಾಲಿತ ರೈಲು ಸೇವೆ ಇದಾಗಿದ್ದು, ಈ ವರ್ಷದ ಜೂನ್‌ನಲ್ಲಿ ಅದು ಕಾರ್ಯಾಚರಣೆಗಳನ್ನು ಆರಂಭಿಸುವ ನಿರೀಕ್ಷೆಯಿದೆ. ಟಿಬೆಟ್‌ನಲ್ಲಿ ಬುಲೆಟ್ ರೈಲು ಹಳಿಯ ನಿರ್ಮಾಣ ಕಾರ್ಯವು 2020ರಲ್ಲಿ ಪೂರ್ಣಗೊಂಡಿತ್ತು. ಈ ಮಾರ್ಗದಲ್ಲಿ ಬುಲೆಟ್ ರೈಲು ತಾಸಿಗೆ 160 ಕಿ.ಮೀ. ವೇಗದಲ್ಲಿ ಚಲಿಸಲಿದೆಯೆಂದು ಚೀನಾದ ಸರಕಾರಿ ಸ್ವಾಮ್ಯದ ಚೀನಾ ಸ್ಟೇಟ್ ರೈಲ್ವೆ ಗ್ರೂಪ್‌ನ ಸಹಸಂಸ್ಧೆಯಾದ ಟಿಬೆಟ್ ರೈಲ್ವೆ ಕನ್‌ಸ್ಟ್ರಕ್ಷನ್ ಕಂಪೆನಿ ತಿಳಿಸಿದೆ.

 ಚೀನಾವು ತನ್ನ ಅತಿ ವೇಗದ ರೈಲುಗಳ ಜಾಲವನ್ನು 2025ರೊಳಗೆ 50 ಸಾವಿರ ಕಿ.ಮೀ.ವರೆಗೆ ವಿಸ್ತರಿಸುವ ಉದ್ದೇಶವನ್ನು ಹೊಂದಿದೆ ಎಂದು ಚೀನಾ ಸ್ಟೇಟ್ ರೈಲ್ವೆ ಗ್ರೂಪ್‌ನ ಅಧ್ಯಕ್ಷರಾದ ಲು ಡೊಂಗ್‌ಫು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News