ಈಕ್ವಿಟೋರಿಯಲ್ ಗಿನಿ : ಸರಣಿ ಸ್ಫೋಟಕ್ಕೆ 20 ಬಲಿ ; 600 ಮಂದಿಗೆ ಗಾಯ

Update: 2021-03-08 03:50 GMT

ಒಗುಡಾಗು : ಈಕ್ವಿಟೋರಿಯಲ್ ಗಿನಿ ಮಿಲಿಟರಿ ಬರಾಕ್‌ಗಳಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, 600ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.

ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 4ಕ್ಕೆ ಸ್ಫೋಟ ಸಂಭವಿಸಿದ್ದು, ಬಾಟಾದ ಮೊಂಡಾಂಗ್ ಕುಂಟೊಮಾ ಬಳಿಯ ಮಿಲಿಟರಿ ಬರಾಕ್‌ನಲ್ಲಿ ಡೈನಮೈಟ್‌ಗಳನ್ನು ನಿರ್ಲಕ್ಷ್ಯದಿಂದ ನಿರ್ವಹಿಸಿದ್ದು, ಸ್ಫೋಟಕ್ಕೆ ಕಾರಣ ಎಂದು ಅಧ್ಯಕ್ಷ ಟ್ಯೊಡೊರೊ ಒಬಿಯಾಂಗ್ ಹೇಳಿದ್ದಾರೆ.

"ಈ ಸ್ಫೋಟದ ಪರಿಣಾಮದಿಂದ ಬಾಟಾದ ಎಲ್ಲ ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿವೆ ಎಂದು ಅಧ್ಯಕ್ಷರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಮಿಲಿಟರಿ ಬರಾಕ್‌ನ ಶಸ್ತ್ರಾಸ್ತ್ರ ಡಿಪೋದಲ್ಲಿ ನಡೆದ ಅಗ್ನಿ ಆಕಸ್ಮಿಕದಿಂದಾಗಿ ಮದ್ದುಗುಂಡುಗಳು ಸಿಡಿದಿವೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ. ಘಟನೆಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟು 600ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದೆ.

ಬರಾಕ್ ಅಕ್ಕಪಕ್ಕದ ಹೊಲಗಳಲ್ಲಿ ಜನ ಬೆಂಕಿ ಹಾಕಿದ್ದು, ಅಗ್ನಿ ಆಕಸ್ಮಿಕಕ್ಕೆ ಕಾರಣ ಇರಬಹುದು ಎಂದು ಅಧ್ಯಕ್ಷರು ಹೇಳಿದ್ದಾರೆ. ಸ್ಫೋಟ ಸ್ಥಳದಿಂದ ದಟ್ಟ ಹೊಗೆ ಬಾನೆತ್ತರಕ್ಕೆ ಚಿಮ್ಮುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಜನ ಭೀತಿಯಿಂದ ಓಡುತ್ತಾ "ಏನಾಯಿತು ಎನ್ನುವುದು ನಮಗೆ ತಿಳಿಯದು; ಎಲ್ಲವೂ ನಾಶವಾಗಿದೆ" ಎಂದು ಹೇಳಿದ್ದಾರೆ.

ಈಕ್ವಿಟೋರಿಯಲ್ ಗಿನಿ ಆಫ್ರಿಕನ್ ದೇಶವಾಗಿದ್ದು, ಕ್ಯಾಮರೂನ್‌ನ ದಕ್ಷಿಣಕ್ಕಿದೆ. 13 ಲಕ್ಷ ಜನಸಂಖ್ಯೆ ಹೊಂದಿದ ದೇಶ 1968ರಲ್ಲಿ ಸ್ಪೇನ್‌ನಿಂದ ಸ್ವಾತಂತ್ರ ಪಡೆಯಿತು. ಬಾಟಾದ ಜನಸಂಖ್ಯೆ 1.75 ಲಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News