ಫ್ರಾನ್ಸ್‌ನ ಶ್ರೀಮಂತ ರಾಜಕಾರಣಿ ಹೆಲಿಕಾಫ್ಟರ್ ಅಪಘಾತದಲ್ಲಿ ಮೃತ್ಯು

Update: 2021-03-08 04:36 GMT
ಫೋಟೊ : (Twitter/@ODassault)

ಪ್ಯಾರೀಸ್ : ಕನ್ಸರ್ವೇಟಿವ್ ಪಕ್ಷದ ಕೋಟ್ಯಧೀಶ, ರಾಜಕಾರಣಿ ಒಲಿವೀರ್ ಡಸಾಲ್ಟ್ ರವಿವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾಕ್ರೋನ್ ಟ್ವೀಟ್ ಮಾಡಿದ್ದಾರೆ.

ಒಲಿವೀರ್ (69) ರಫೇಲ್ ಯುದ್ಧ ವಿಮಾನಗಳನ್ನು ತಯಾರಿಸುವ ಕಂಪನಿಯ ಮತ್ತು ಫಿಗಾರೊ ಪತ್ರಿಕೆಯ ಮಾಲಕ ಸೆರ್ಗಿ ಡಸಾಲ್ಟ್ ಅವರ ಹಿರಿಯ ಮಗ.
"ಒಲಿವೀರ್ ಡಸಾಲ್ಟ್ ಫ್ರಾನ್ಸನ್ನು ಪ್ರೀತಿಸಿದ್ದರು. ಉದ್ಯಮ ಕ್ಷೇತ್ರದ ಕ್ಯಾಪ್ಟನ್ ಆಗಿದ್ದರು. ಸಂಸದರು, ಸ್ಥಳೀಯ ಚುನಾಯಿತ ಅಧಿಕಾರಿ. ವಾಯುಪಡೆದ ಮೀಸಲು ಕಮಾಂಡರ್ ಆಗಿದ್ದರು. ದೇಶಸೇವೆ ಮಾಡುವಲ್ಲಿ ಅವರು ಎಂದೂ ವಿಶ್ರಮಿಸಿದವರಲ್ಲ. ಅವರ ಸಾವಿನಿಂದ ತೀವ್ರ ನಷ್ಟವಾಗಿದೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದೇನೆ" ಎಂದು ಮಾಕ್ರೋನ್ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

ಒಲಿವೀರ್ ವಿಹಾರಗೃಹ ಹೊಂದಿದ್ದ ನೋರ್ಮಂಡಿಯಲ್ಲಿ ರವಿವಾರ ಮಧ್ಯಾಹ್ನ ಹೆಲಿಕಾಪ್ಟರ್ ದುರಂತ ಸಂಭವಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ. ಒಲಿವೀರ್ 2002ರಿಂದಲೂ ಕನ್ಸರ್ವೇಟಿವ್ ಲೆಸ್ ರಿಪಬ್ಲಿಕನ್ ಪಕ್ಷದ ಸಂಸದರಾಗಿದ್ದರು. 2020ರ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಡಸಲ್ಟ್ ವಿಶ್ವದ 361ನೇ ಅತಿಶ್ರೀಮಂತ ವ್ಯಕ್ತಿ ಎನಿಸಿದ್ದರು.

ಹಿತಾಸಕ್ತಿಯ ಸಂಘರ್ಷ ತಪ್ಪಿಸುವ ಸಲುವಾಗಿ ತಮ್ಮ ರಾಜಕೀಯ ಪಾತ್ರ ನಿರ್ವಹಿಸಲು ಅವರು ಡಸಾಲ್ಟ್ ಆಡಳಿತ ಮಂಡಳಿಯಿಂದ ನಿರ್ಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News