ಗ್ರಾಮೀಣ ಅಭಿವೃದ್ಧಿಯಿಂದ ಸಮಗ್ರ ಅಭಿವೃದ್ಧಿ: ಚಂದ್ರಶೇಖರ ಸ್ವಾಮೀಜಿ

Update: 2021-03-08 06:38 GMT

ಮುಲ್ಕಿ: ಗ್ರಾಮೀಣ ಭಾಗ ಅಭಿವೃದ್ಧಿಯಾದರೆ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ಜನಪ್ರತಿನಿಧಿಗಳ ಜವಾಬ್ದಾರಿ ಹೆಚ್ಚಿದೆ. ಜನರ ಕಷ್ಟ ಸುಖಗಳಿಗೆ ತಳಮಟ್ಟದಲ್ಲಿದ್ದು, ಸ್ಪಂದಿಸುವ ಜವಾಬ್ದಾರಿ ಗ್ರಾಮ ಪಂಚಾಯತ್ ಸದಸ್ಯ, ಅಧ್ಯಕ್ಷರಿಗೆ ಇರುತ್ತದೆ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಮುಲ್ಕಿಯ ಆಸುಪಾಸಿನ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಉಪಾಧ್ಯಕ್ಷರನ್ನು ಆಶ್ರಮದಲ್ಲಿ ಅಭಿನಂದಿಸಿ ಮಾತನಾಡುತ್ತಿದ್ದರು. ನಗರ ಮತ್ತು ಗ್ರಾಮೀಣ ಭಾಗದ ಅಂತರ ಕಡಿಮೆ ಮಾಡುವ ಜವಾಬ್ದಾರಿ ಸ್ಥಳೀಯಾಡಳಿತದ್ದಾಗಿದೆ. ನಗರ ಪ್ರದೇಶಕ್ಕೆ ಹೆಚ್ಚಿನ ಅನುದಾನವು ಬರುತ್ತದೆ. ಆದರೆ ಗ್ರಾಮ ಪಂಚಾಯತ್‌ಗೆ ಸೀಮಿತ ಅನುದಾನ ಇರುತ್ತದೆ. ಸೀಮಿತ ಅನುದಾನವನ್ನು ಸಮಗ್ರವಾಗಿ ಬಳಸುವುದರೊಂದಿಗೆ, ಹೆಚ್ಚುವರಿ ಅನುದಾನಕ್ಕಾಗಿ ಹೋರಾಡುವ ಮನೋಸ್ಥಿತಿಯನ್ನು ಪಂಚಾಯತ್‌ನ ಅಧ್ಯಕ್ಷರು-ಉಪಾಧ್ಯಕ್ಷರು ಬೆಳೆಸಿಕೊಳ್ಳಬೇಕು ಎಂದರು.

ಅಭಿವೃದ್ಧಿಯಲ್ಲಿ ಎಂದಿಗೂ ರಾಜಕೀಯ ಮಾಡಬಾರದು. ಪಂಚಾಯತ್‌ಗೆ ಹೆಚ್ಚೆಚ್ಚು ಅನುದಾನ ತರಲು ಹೋರಾಟ ಮಾಡುವುದು ಮತ್ತು ಅವುಗಳ ಸಮಗ್ರ ಅನುಷ್ಠಾನವೇ ಧ್ಯೇಯವಾಗಿರಬೇಕು. ಹಾಗಿದ್ದರೆ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡಿದ ಸಾರ್ವಜನಿಕರ ಋಣ ತೀರಿಸಿದಂತಾಗುತ್ತದೆ ಎಂದರು.

ಕಿಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ ಪಡಂಗ, ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಹರ ಕೋಟ್ಯಾನ್, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಲಾಯಿತು.

ಜ್ಯೋತಿಷಿ ವಿಶ್ವನಾಥ ಭಟ್, ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ ಭಟ್, ರೋಶನಿ ಭಟ್, ರಾಹುಲ್ ಸಿ.ಭಟ್, ಸಂಚಾಲಕ ಪುನೀತ್ ಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News