×
Ad

ಮುಲ್ಕಿ: ಅಂತಾರಾಷ್ಟ್ರೀಯ ಸರ್ಫಿಂಗ್ ಖ್ಯಾತಿಯ ಮುಂಡಾ ಬೀಚ್ ನಲ್ಲಿ ಕಡಲ್ಕೊರೆತ; ಆತಂಕ

Update: 2021-03-08 12:11 IST

ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲುವಿನ ಅಂತಾರಾಷ್ಟ್ರೀಯ ಸರ್ಫಿಂಗ್ ಖ್ಯಾತಿಯ ಮುಂಡಾ ಬೀಚ್ ಸಮುದ್ರ ಪಾಲಾಗುತ್ತಿದ್ದು ಅಂತಿಮ ಕ್ಷಣ ಎಣಿಸುತ್ತಿದೆ ಎಂದು ಹಳೆಯಂಗಡಿ ಗ್ರಾಪಂ ಸದಸ್ಯ ಚಂದ್ರಕುಮಾರ್ ಭೀತಿ ವ್ಯಕ್ತಪಡಿಸಿದ್ದಾರೆ.

ರವಿವಾರ ಮುಂಡಾ ಬೀಚ್ ನಲ್ಲಿ ತೀವ್ರ ಕಡಲ್ಕೊರೆತ ಕಂಡುಬಂದಿದ್ದು, ನೋಡನೋಡುತ್ತಿದ್ದಂತೆಯೇ ಒಂಬತ್ತು ಮರಗಳು ಸಮುದ್ರಪಾಲಾಗಿವೆ.

ಎರಡು ಕಸದ ತೊಟ್ಟಿ ಹಾಗೂ ಪ್ರವಾಸಿಗರು ಕುಳಿತುಕೊಳ್ಳುವ ಸಿಮೆಂಟ್ ಬೆಂಚ್ ನೀರು ಪಾಲಾಗಿದೆ. ಬೀಚ್ ಬಳಿ ಮೂರು ಅಂಗಡಿಗಳಿದ್ದು, ಎರಡು ಅಂಗಡಿಗಳು ಈಗಾಗಲೇ ಸಮುದ್ರ ಪಾಲಾಗಿದೆ. ಉಳಿದ ಒಂದು ಅಂಗಡಿ ಸಮುದ್ರ ಪಾಲಾಗಲು ಕ್ಷಣಗಣನೆ ಎಣಿಸುತ್ತಿದೆ ಎಂದರು.

ತೀವ್ರ ಗಾಳಿ ನಡುವೆ ಸಮುದ್ರ ಅಲ್ಲೋಲಕಲ್ಲೋಲವಾಗಿದ್ದು,  ಕಡಲ್ಕೊರೆತ ತಡೆಯಲು ಹಾಕಿರುವ ಕಲ್ಲುಗಳು ನೀರುಪಾಲಾಗಿವೆ. ಇನ್ನೆರಡು ದಿನ  ಜೋರುಗಾಳಿ  ಮುಂದುವರಿದು ಕಡಲ್ಕೊರೆತ ಉಂಟಾದರೆ ಮುಂಡಾ ಬೀಚ್ ಪೂರ್ತಿ ಕಡಲ ಒಡಲು ಸೇರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಬೀಚ್ ಬಳಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ನೆರೆದಿದ್ದು, ಕಣ್ಮುಂದೆಯೇ ಬೀಚ್ ನೀರು ಪಾಲಾಗುತ್ತಿರುವುದನ್ನು ಕಂಡು ಭಯಭೀತರಾದರು.  ಮುಂಡಾ ಬೀಚ್ ಬಳಿ ತಡೆಗೋಡೆ ನಿರ್ಮಾಣ, ಅಭಿವೃದ್ಧಿ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಸುಳ್ಳು ಭರವಸೆಗಳನ್ನು ಮಾತ್ರ ನೀಡಿದ್ದು, ಇದುವರೆಗೂ ಅನುಷ್ಠಾನಗೊಂಡಿಲ್ಲ ಎಂದು ಚಂದ್ರಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News