ಮಂಗಳೂರು: ಡಬ್ಲ್ಯೂಐಎಂನಿಂದ ಐವರು ಸಾಧಕರಿಗೆ ಸನ್ಮಾನ

Update: 2021-03-08 08:42 GMT

ಮಂಗಳೂರು, ಮಾ.8: ವಿಮೆನ್ ಇಂಡಿಯಾ ಮೂವೆಂಟ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಮಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಐವರು ಸಾಧಕಿಯರನ್ನು ಸನ್ಮಾನಿಸಲಾಯಿತು.

ಹುಟ್ಟಿನಿಂದಲೇ ಎರಡೂ ಕೈಗಳಿಲ್ಲದೆ ಶೈಕ್ಷಣಿಕವಾಗಿ ಸಾಧನೆ ತೋರಿರುವ ಸಬಿತಾ ಮೊನಿಸ್ ಬೆಳ್ತಂಗಡಿ, ವಿವಿಧ ಸೇವಾ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿ ಕೊಂಡಿರುವ ಆಯಿಷಾ ಬಾನು ಕಾರ್ಕಳ, ಆಶ್ಲೀನ್, ಸಂಶಾದ್, ರೇಷ್ಮಾ ಹೆಜಮಾಡಿ ಅವರನ್ನು ನಗರದ ಶಾಂತಿನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ನಗರದ ಶಾಂತಿ ನಿಲಯದಲ್ಲಿ ‘ಮಹಿಳೆಯ ಘನತೆ ದೇಶದ ಘನತೆ’ ಎಂಬ ಘೋಷಣೆಯಡಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ  ಎನ್ ಡಬ್ಲ್ಯೂಎಫ್ ರಾಜ್ಯಾಧ್ಯಕ್ಷೆ ಹಾಗೂ ಬಂಟ್ವಾಳ ಪುರಸಭಾ ಸದಸ್ಯೆ ಝೀನತ್ ಬಂಟ್ವಾಳ ಮಾತನಾಡಿದರು.

ವಿಶ್ವದ ಜನಸಂಖ್ಯೆಯಲ್ಲಿ ಸಮಾನವಾಗಿ ಗುರುತಿಸಿಕೊಂಡಿರುವ ಮಹಿಳೆಯರು ಅನ್ಯಾಯ, ದೌರ್ಜನ್ಯಗಳನ್ನು ಸಹಿಸಿಕೊಳ್ಳದೆ ಧ್ವನಿ ಎತ್ತುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಅವರು ಈ ಸಂದರ್ಭ ಕರೆ ನೀಡಿದರು.

ಪ್ರತಿಭಟನೆ, ಪ್ರತಿರೋಧವನ್ನು ಪ್ರಸಕ್ತ ಫ್ಯಾಸಿಸಂ ವ್ಯವಸ್ಥೆ ತಡೆಯುವ ಪ್ರಯತ್ನವು ಮಹಿಳೆಯರನ್ನು ಹೋರಾಟದಿಂದ ಹಿಂದೆ ಸರಿಯುವಂತೆ ಮಾಡುವ ಬದಲು ಹೋರಾಟದ ಕಿಚ್ಚನ್ನು ಹೆಚ್ಚಿಸಿರುವುದು ಕಳೆದ ಕೆಲವು ಸಮಯದಿಂದ ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಂದ ಸಾಬೀತಾಗಿದೆ. ಮಹಿಳೆಯರು ದುರ್ಬಲರು, ಮೌನಿಗಳಲ್ಲ, ಅವರು ಒಗ್ಗಟ್ಟಾದರೆ ಸದೃಢ ಹೋರಾಟ ಸಾಧ್ಯ ಎಂಬುದೂ ದೃಢವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಸ್ತಿತ್ವ, ಸಮಾನತೆಯ ಪ್ರಶ್ನೆ ಬಂದಾಗ ಮಹಿಳೆಯರು ಸುಮ್ಮನಿದ್ದು ನೋಡುವಂತಿಲ್ಲ. ಬದಲಾಗಿ ಕಾನೂನು ಹಾಗೂ ಸಂವಿಧಾನ ಬದ್ಧವಾಗಿ ನಮ್ಮ ಅಸ್ತಿತ್ವವನ್ನು ಪ್ರದರ್ಶಿಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಲಿತ ಸಂಘರ್ಷ ಸಮಿತಿ ಸದಸ್ಯೆ ಹಾಗೂ ಅಧ್ಯಾಪಕಿ ಡಾ. ಪದ್ಮಲತಾ ಮಾತನಾಡಿ, ದಲಿತರನ್ನು ಹಾಗೂ ಅಲ್ಪಸಂಖ್ಯಾತ ರನ್ನು ಸಮಾಜದಲ್ಲಿ ತುಳಿಯುವ ಕೆಲಸ ಇಂದಿಗೂ ನಡೆಯುತ್ತಿದ್ದು, ಹೋರಾಟವೇ ಪ್ರಬಲ ಅಸ್ತ್ರ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆದರ್ಶ ಗ್ರೂಪ್ ಆಫ್ ಎಜುಕೇಶನ್ ಇನ್‌ಸ್ಟಿಟ್ಯೂಟ್ ಮಿಜಾರು ಇದರ ಪ್ರಾಂಶುಪಾಲೆ ಶಾಂತಿ ವಿಜಯ, ಕಾರ್ಮಿಕ ಆಯುಕ್ತಕರ ಕಚೇರಿಯ ನೌಕರೆ ನಸೀಬಾ ಕೆ. ಭಾಗವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯೆ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘಟನೆಯ ಬುಲೆಟಿನ್ ಬಿಡುಗಡೆಗೊಳಿಸಲಾಯಿತು.

ವಿಮೆನ್ ಇಂಡಿಯಾ ಮೂವ್‌ಮೆಂಟ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಷಾ ಬಜ್ಪೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News