ಮಂಗಳೂರು : ದೇವಸ್ಥಾನದ ಕಾಣಿಕೆ ಡಬ್ಬಿ, ದ್ವಿಚಕ್ರ ವಾಹನ ಕಳವು ಪ್ರಕರಣ; ಬಜರಂಗದಳ ಸಂಚಾಲಕ ಸೆರೆ

Update: 2021-03-08 10:19 GMT

ಮಂಗಳೂರು : ದೇವಸ್ಥಾನದ ಕಾಣಿಕೆ ಡಬ್ಬಿ ಕಳವು, ದ್ವಿಚಕ್ರ ವಾಹನ ಕಳವು ಸೇರಿದಂತೆ‌ ಹಲವಾರು ಕಳ್ಳತನ ಪ್ರಕರಣದ ಆರೋಪಿ, ಸಂಘಪರಿವಾರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಕೊಣಾಜೆಯ ಮೊಂಟೆಪದವು ಬಳಿ ಸ್ಥಳೀಯರು ಹಿಡಿದು ಕೊಣಾಜೆ ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ರವಿವಾರ ರಾತ್ರಿ ನಡೆದಿದೆ.

ಮೊಂಟೆಪದವಿನ ತಾರಾನಾಥ ಯಾನೆ ಮೋಹನ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಮೊಂಟೆಪದವಿನ ಮನೆಯೊಂದರ ಅಂಗಳದಲ್ಲಿದ್ದ ಸ್ಕೂಟರ್ ಕಳವು ಮಾಡಿ ಪರಾರಿಯಾಗಿದ್ದು, ಮನೆಮಂದಿ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಹಲವು ಮಂದಿಯ ಜೊತೆ ಚರ್ಚಿಸಿದಾಗ ಆರೋಪಿ ತಾರಾನಾಥ ಎಂಬುದನ್ನು ಖಚಿತಪಡಿಸಿಕೊಂಡು‌ ರವಿವಾರ ರಾತ್ರಿ ಆತನ ಮನೆಗೆ ಹೋದಾಗ ಪರಾರಿಯಾಗಲು ಯತ್ನಿಸಿದ್ದು, ಬೆನ್ನಟ್ಟಿದ್ದ ಸಾರ್ವಜನಿಕರು ತಾರಾನಾಥನನ್ನು ಹಿಡಿದು ಕೊಣಾಜೆ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ದೇವಸ್ಥಾನದ ಕಾಣಿಕೆ ಡಬ್ಬಿ, ಮನೆಗಳಿಗೂ ನುಗ್ಗಿ ಕಳ್ಳತನ

ತಾರಾನಾಥ ಹಲವು ಮನೆಗಳಿಂದ ಚಿನ್ನಾಭರಣ, ಅಡಕೆ ಮೂಟೆ, ತನ್ನ ಮಿತ್ರರ ವಾಹನಗಳಿಂದಲೇ ಪೆಟ್ರೋಲ್ ಕಳವು ಮಾತ್ರವಲ್ಲದೆ ಸ್ಥಳೀಯ ದೇವಸ್ಥಾನವೊಂದರ ಕಾಣಿಕೆ ಡಬ್ಬಿಯ ಹಣವನ್ನೂ ಕಳವು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಗಂಗರಮಜಲು ಪರಿಸರದ ಬಡ ಕುಟುಂಬದ ಮನೆಯಲ್ಲಿ  ತಾರಾನಾಥ ಕಳ್ಳತನಕ್ಕೆ ಯತ್ನಿಸಿದ್ದು, ಮನೆ ಮಂದಿ ಎಚ್ಚರಗೊಂಡಿದ್ದರಿಂದ ತಾನು ಬಂದಿದ್ದ ಸ್ಕೂಟರ್ ಬಿಟ್ಟು ಪರಾರಿಯಾಗಿದ್ದ. ಪೊಲೀಸರಿಗೆ ಹೆದರಿ ಠಾಣೆಗೆ ಹಾಜರಾದ ಆತನನ್ನು ಕೊಣಾಜೆ ಪೊಲೀಸರು ಮುಚ್ಚಳಿಕೆ ಬರೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಆರೋಪಿ ತಾರನಾಥ ಮೊಂಟೆಪದವು ಶಾರದಾನಗರದ ವಿಶ್ವ ಹಿಂದೂ ಪರಿಷತ್, ಬಜರಂಗದಳ ವೀರಾಂಜನೇಯ ಶಾಖೆಯ ಸಂಚಾಲಕನೂ ಆಗಿದ್ದ. ಅಲ್ಲದೆ ಪರಿಸರದಲ್ಲಿ ಸಂಘಪರಿವಾರ ಸಂಘಟನೆಯ ನೇತೃತ್ವದಲ್ಲಿ ‌ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ಕಳ್ಳತನ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ಬಳಿಕ ಈತನನ್ನು ಸಂಘಟನೆಯಿಂದ ದೂರವಿಡಲಾಗಿದೆ ಎಂದು ತಿಳಿದುಬಂದಿದ್ದು, ಆ ಬಳಿಕ ಸುಮಾರು ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ತಾರಾನಾಥ ತನ್ನ‌ ಕೃತ್ಯ ಮತ್ತೆ ಮುಂದುವರಿಸಿದ್ದು, ಶನಿವಾರ ನಡೆದ ಸ್ಕೂಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕರು ಆತನನ್ನು ಹಿಡಿದು ಕೊಣಾಜೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News