ಮಹಿಳೆಯರ ಬಗ್ಗೆ ಅತ್ಯುನ್ನತ ಗೌರವವಿದೆ: ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ; ಸಿಜೆಐ ಬೋಬ್ಡೆ

Update: 2021-03-08 10:35 GMT

ಹೊಸದಿಲ್ಲಿ: ಕಳೆದ ವಾರ ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ವೇಳೆ ತಾವು ಆಡಿದ ಮಾತುಗಳು ಮಹಿಳೆಯರಿಗೆ ಅಗೌರವ ಸೂಚಿಸುತ್ತಿರುವ ರೀತಿಯಲ್ಲಿ ಸಂಪೂರ್ಣವಾಗಿ ತಪ್ಪಾಗಿ ವರದಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಹೇಳಿದ್ದಾರೆ.

"ನಾವು ಆತನಿಗೆ (ಅತ್ಯಾಚಾರ ಆರೋಪಿಗೆ) ವಿವಾಹವಾಗಲು ಹೇಳಿಲ್ಲ. ʼನೀನು ಮದುವೆಯಾಗುತ್ತೀಯ?ʼ ಎಂದು ಕೇಳಿದೆವು. ʼಮದುವೆಯಾಗು' ಎಂದು ಹೇಳಿಲ್ಲ, ಎಂದು ಸಿಜೆಐ ಬೊಬ್ಡೆ ಹೇಳಿದರು. ಈ ಸಂಸ್ಥೆಗೆ, ಪ್ರಮುಖವಾಗಿ ಈ ಪೀಠಕ್ಕೆ ಮಹಿಳೆಯರ ಬಗ್ಗೆ ಅತ್ಯುನ್ನತ ಗೌರವವಿದೆ" ಎಂದೂ ಅವರು ಹೇಳಿದರು.

ಶಾಲಾ ಬಾಲಕಿಯೊಬ್ಬಳನ್ನು ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪೆನಿಯಲ್ಲಿ ಟೆಕ್ನಿಷಿಯನ್ ಆಗಿದ್ದ ಮೋಹಿತ್ ಸುಭಾಶ್ ಎಂಬಾತನ ಜಾಮೀನು ಅರ್ಜಿ ವಿಚಾರಣೆ ಮಾರ್ಚ್ 1ರಂದು ನಡೆದ ಸಂದರ್ಭ "ನಿನಗೆ ಮದುವೆಯಾಗಬೇಕಿದ್ದರೆ ನಾವು ಸಹಾಯ ಮಾಡಬಲ್ಲೆವು. ಇಲ್ಲದೇ ಇದ್ದರೆ ನೀನು ನೌಕರಿ ಕಳೆದುಕೊಂಡು ಜೈಲಿಗೆ ಹೋಗುವೆ. ನೀನು ಬಾಲಕಿಗೆ ಆಮಿಷವೊಡ್ಡಿ ಅತ್ಯಾಚಾರವೆಸಗಿರುವೆ. ನಾನು ನಿಮ್ಮನ್ನು ಬಲವಂತ ಪಡಿಸುವುದಿಲ್ಲ" ಎಂದು ಸಿಜೆಐ  ಹೇಳಿದ್ದರು.

ಆದರೆ ಅತ್ಯಾಚಾರಕ್ಕೆ ವಿವಾಹವೇ ಪರಿಹಾರ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಲು ಹೊರಟಂತಿದೆ ಎಂಬ ಅಭಿಪ್ರಾಯದೊಂದಿಗೆ  ವ್ಯಾಪಕ ಟೀಕೆಗಳು ಹರಿದು ಬಂದಿದ್ದವು.

ಸಂತ್ರಸ್ತೆಗೆ 18 ವರ್ಷ ಪೂರೈಸಿದ ನಂತರ ಆಕೆಯನ್ನು ವಿವಾಹವಾಗುವುದಾಗಿ ಆರೋಪಿ ಒಪ್ಪಿರುವ ಕುರಿತ ದಾಖಲೆಗಳ ಆಧಾರದಲ್ಲಿ ಸುಪ್ರೀಂ ಕೋರ್ಟ್ ಹಾಗೆ ಪ್ರಶ್ನಿಸಿತ್ತು ಎಂದು ಕೋರ್ಟ್ ಅಧಿಕಾರಿಗಳು ನಂತರ ಸ್ಪಷ್ಟೀಕರಣ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News