ರಾಮಮಂದಿರಕ್ಕೆ ದೇಣಿಗೆ ನೀಡಿಲ್ಲವೆಂದು ಅಧ್ಯಾಪಕನನ್ನು ವಜಾ ಮಾಡಿದ ಶಾಲೆ: ಆರೋಪ

Update: 2021-03-08 11:24 GMT
ಸಾಂದರ್ಭಿಕ ಚಿತ್ರ

ಬಲ್ಲಿಯಾ: ಆರೆಸ್ಸೆಸ್ ಸಂಘಟನೆಯು ನಡೆಸುತ್ತಿರುವ ಶಾಲೆಯೊಂದರಲ್ಲಿ, ಅಧ್ಯಾಪಕರೋರ್ವರು ರಾಮಮಂದಿರ ನಿರ್ಮಾಣಕ್ಕೆ 1,000ರೂ. ದೇಣಿಗೆ ನೀಡಲು ನಿರಾಕರಿಸಿದ್ದಕ್ಕೆ ಅವರನ್ನು ಶಾಲೆಯಿಂದ ಅಮಾನತು ಮಾಡಿದ ಘಟನೆಯು ಉತ್ತರಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ಆದರೆ ಈ ಆರೋಪವ ನ್ನು ಶಿಕ್ಷಣ ಸಂಸ್ಥೆಯು ನಿರಾಕರಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಯಶ್ವಂತ್ ಪ್ರತಾಪ್ ಸಿಂಗ್ ಎಂಬವರು ಜಗದೀಶಪುರದಲ್ಲಿರುವ ಆರೆಸ್ಸೆಸ್ ನಡೆಸುತ್ತಿರುವ ಸರಸ್ವತಿ ಶಿಶು ಮಂದಿರದಲ್ಲಿ ಆಚಾರ್ಯ (ಅಧ್ಯಾಪಕ)ರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶಾಲೆಯ ಆಡಳಿತ ಮಂಡಳಿಯು ತನ್ನ 8 ತಿಂಗಳ ಸಂಬಳವನ್ನೂ ತಡೆ ಹಿಡಿದಿದೆ ಎಂದು ಅವರು ಆರೋಪಿಸಿದ್ದಾರೆ. 

ರಾಂಮಂದಿರಕದಕೆ ದೇಣಿಗೆ ಸಂಗ್ರಹಿಸಲೆಂದು ಅವರಿಗೆ ರಿಸಿಪ್ಟ್ ಪುಸ್ತಕ ನೀಡಲಾಗಿತ್ತು. ಅವರು ಹಣ ಸಂಗ್ರಹ ಮಾಡಿ 80,000ರೂ. ಯನ್ನು ನೀಡಿದ್ದರು ಎನ್ನಲಾಗಿದೆ. ಬಳಿಕ ಆರೆಸ್ಸೆಸ್ ನ ಜಿಲ್ಲಾ ಪ್ರಚಾರಕ್ ಶಾಲೆಗೆ ಭೇಟಿ ನೀಡಿದ ಸಂದರ್ಭ ಮತ್ತೆ 1,000ರೂ. ನೀಡಬೇಕೆಂದು ಬಲವಂತ ಮಾಡಿದ್ದರು ಎನ್ನಲಾಗಿದೆ. ಆದರೆ ಯಶ್ವಂತ್ ಹಣ ನೀಡಲು ನಿರಾಕರಿಸಿದಾಗ ಶಾಲಾ ಆಡಳಿತ ಮಂಡಳಿಯವರು ಅನುಚಿತ ವರ್ತನೆ ತೋರಿ ಅವರನ್ನು ಶಾಲೆಯಿಂದ ಅಮಾನತು ಮಾಡಿದ್ದಾರೆ ಎಂದು ಯಶ್ವಂತ್ ತಿಳಿಸಿದ್ದಾರೆ.

ಈ ಕುರಿತು ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಿಖಿತ ದೂರು ನೀಡಿದ್ದಾರೆ. ತನಗೆ ನ್ಯಾಯ ಒದಗಿಸದಿದ್ದರೆ ನ್ಯಾಯಾಲಯವನ್ನು ಸಂಪರ್ಕಿಸುವುದಾಗಿ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News