ಒಂದು ದಿನ ಭಾರತದ ಹೆಸರನ್ನೂ 'ನರೇಂದ್ರ ಮೋದಿ' ಎಂದು ಬದಲಾಯಿಸಬಹುದು: ಮಮತಾ ಬ್ಯಾನರ್ಜಿ

Update: 2021-03-08 14:07 GMT

ಕೋಲ್ಕತ್ತಾ: ಸರ್ದಾರ್ ಪಟೇಲ್ ರ ಹೆಸರಿನ ಬದಲು ನರೇಂದ್ರ ಮೋದಿ ಸ್ಟೇಡಿಯಂ ಎಂದು ನಾಮಕರಣ ಮಾಡಿದ ಕುರಿತು ಹಾಗೂ ಕೋವಿಡ್ ಲಸಿಕೆಯ ಸರ್ಟಿಫಿಕೇಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರವನ್ನು ಪ್ರಕಟಿಸಿರುವ ಕುರಿತಾದಂತೆ ಉಲ್ಲೇಖಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಒಂದು ದಿನ ಭಾರತದ ಹೆಸರನ್ನೂ ನರೇಂದ್ರ ಮೋದಿ ಎಂದು ಬದಲಾಯಿಸಬಹುದು" ಎಂಬ ಹೇಳಿಕೆ ನೀಡಿದ್ದಾರೆ.

"ಸ್ಟೇಡಿಯಂಗೆ ನರೇಂದ್ರ ಮೋದಿಯ ಹೆಸರಿಡಲಾಗಿದೆ. ಕೋವಿಡ್ ಲಸಿಕೆಯ ಪ್ರಮಾಣಪತ್ರದಲ್ಲೂ ಅವರ ಫೋಟೊ ಹಾಕಲಾಗಿದೆ. ಇಸ್ರೋ ನರೇಂದ್ರ ಮೋದಿಯ ಫೋಟೊವನ್ನು ಬಾಹ್ಯಾಕಾಶಕ್ಕೆ ಕಳಿಸುವಂತೆ ಮಾಡುತ್ತಿದ್ದಾರೆ. ಒಂದು ದಿನ ಬರಲಿದೆ. ಅಂದು ಭಾರತ ದೇಶದ ಹೆಸರನ್ನೂ ನರೇಂದ್ರ ಮೋದಿ ಎಂದು ಬದಲಾಯಿಸಬಹುದು" ಎಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಡೆಸಿದ ರ್ಯಾಲಿಯಲ್ಲಿ ಭಾಗವಹಿಸಿದ ಮಮತಾ ಹೇಳಿದರು.

"ಅವರು ಕೇವಲ ಚುನಾವಣೆಯ ಸಮಯದಲ್ಲಿ ಬಂಗಾಳಕ್ಕೆ ಬಂದು ಸುಳ್ಳು ಮತ್ತು ದ್ವೇಷ ಪ್ರಚಾರ ಮಾಡುತ್ತಾರೆ. ಮೋದಿಯು ಮಹಿಳಾ ರಕ್ಷಣೆಯ ಕುರಿತು ಮಾತನಾಡುತ್ತಾರೆ. ಆದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಪರಿಸ್ಥಿತಿ ಹೇಗಿದೆ? ಮೋದಿಯ ಫೇವರಿಟ್ ಗುಜರಾತ್ ನಲ್ಲಿ ಹೇಗಿದೆ ಮಹಿಳೆಯರ ಪರಿಸ್ಥಿತಿ?" ಎಂದು ಮಮತಾ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News