ಮಂಗಳೂರು: ಸಿಟಿಗೋಲ್ಡ್ ಶೋರೂಂನಲ್ಲಿ ಮಹಿಳಾ ದಿನಾಚರಣೆ

Update: 2021-03-08 14:39 GMT

ಮಂಗಳೂರು, ಮಾ.8: ನಗರದ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಿಟಿಗೋಲ್ಡ್ ವತಿಯಿಂದ ನಗರದ ಕಂಕನಾಡಿ ಬೈಪಾಸ್‌ನಲ್ಲಿರುವ ಶೋರೂಂನಲ್ಲಿ ಸೋಮವಾರ ಸಂಜೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ‘ಅನುಪಮ’ ಮಾಸಿಕ ಪತ್ರಿಕೆಯ ಸಂಪಾದಕಿ ಶಹನಾಝ್ ಎಂ., ವರ್ಷದ ಪ್ರತಿದಿನವೂ ಮಹಿಳಾ ದಿನವಾಗಿದೆ. ಹೆಣ್ಣು ಮನಸ್ಸು ಮಾಡಿದರೆ ವಿಶ್ವವನ್ನೇ ಬದಲಿಸುವ ಶಕ್ತಿ ಹೊಂದಿದ್ದಾಳೆ. ತಾಯಿಯ ಪಾದದಲ್ಲಿಯೇ ಸ್ವರ್ಗ ಇರುವುದಾಗಿ ಇಸ್ಲಾಮ್‌ನಲ್ಲಿ ಪ್ರತಿಪಾದಿಸಲಾಗಿದೆ. ಮಹಿಳೆಯರ ಬಗ್ಗೆ ಎಲ್ಲರೂ ಗೌರವ ಹೊಂದಿರಬೇಕು ಎಂದರು.

ದೇಶದಲ್ಲಿ ಹೆಣ್ಣಿನ ಮೇಲೆ ನಿರಂತರ ಅತ್ಯಾಚಾರ, ವರದಕ್ಷಿಣೆ ಸಹಿತ ಹಲವು ಬಗೆಯ ದೌರ್ಜನ್ಯ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಸಾಗಿರುವುದು ಆತಂಕಕಾರಿ ವಿಚಾರ. ಹೆಣ್ಣಿಗೆ ಹೆಚ್ಚಿನ ಅವಕಾಶ ನೀಡುವ ಅಗತ್ಯವಿಲ್ಲ. ಆಕೆಯನ್ನು ಸಮಾನತೆಯಿಂದ ನೋಡಿದರೆ ಸಾಕು; ಆಕೆಯೇ ಸದೃಢವಾಗಿ ಬೆಳೆದು ನಿಲ್ಲಬಲ್ಲಳು. ಹೆಣ್ಣು ಅಬಲೆಯಲ್ಲ ಸಬಲೆ ಎಂದು ಹೇಳಿದರು.

ಸ್ನೇಹದೀಪ ಮಂಗಳೂರು ಸಂಸ್ಥೆಯ ಮುಖ್ಯಸ್ಥೆ ತಬಸ್ಸುಮ್ ಮಾತನಾಡಿ, ಇಸ್ಲಾಮ್‌ನಲ್ಲಿ ಮಹಿಳೆಗೆ ಉನ್ನತ ಸ್ಥಾನ ನೀಡಲಾಗಿದೆ. ಇದಕ್ಕೆ ತಾನು ಆಭಾರಿಯಾಗಿರುವುದಾಗಿ ತಿಳಿಸಿದರು. ಸ್ನೇಹದೀಪ ಸಂಸ್ಥೆಯಲ್ಲಿ ಎಚ್‌ಐವಿ ಸೋಂಕಿತ ಅನಾಥ ಹೆಣ್ಣುಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ. ಇಲ್ಲಿ ಸೋಂಕಿತ ಮಕ್ಕಳು ಹಲವು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ. ತನ್ನದೇ ಆದ ಚೌಕಟ್ಟಿನಲ್ಲಿ ಸಮಾಜಕ್ಕೆ ಸೇವೆ ನೀಡಬಹುದಾಗಿದೆ ಎಂದರು.

ಕೆಪಿಸಿಸಿ ಕೋ-ಆರ್ಡಿನೇಟರ್ ಪ್ರತಿಭಾ ಕುಳಾಯಿ ಮಾತನಾಡಿ, ಪ್ರತಿ ಯಶಸ್ವಿ ಹೆಣ್ಣಿನ ಹಿಂದೆ ಓರ್ವ ಪುರುಷ ಇರುತ್ತಾನೆ ಎನ್ನುವುದು ಕೂಡ ಅಷ್ಟೇ ಸತ್ಯ. ಎಲ್ಲ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ಸಂಸ್ಥೆ ವತಿಯಿಂದ ಮಹಿಳಾ ದಿನ ಆಚರಿಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಸುಮಂಗಲಾ ಮಾತನಾಡಿ, ಹೆಣ್ಣು ಗಂಡಿಗೆ ಸರಿಸಮಾನವಾಗಿ ನಿಂತು ಕೆಲಸ ಮಾಡಿ ತೋರಿಸುತ್ತಿದ್ದಾಳೆ. ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡುವ ಅಗತ್ಯವಿಲ್ಲ; ಸಮಾನತೆ ನೀಡಿದರೆ ಸಾಕು. ಹೆಣ್ಣಿಗೆ ಹೆಣ್ಣೇ ಶತ್ರು. ನಮ್ಮ ಮನೆಗೆ ಬಂದ ಸೊಸೆಯನ್ನು ಮಗಳಂತೆ ನೋಡಿಕೊಳ್ಳಬೇಕು ಎಂದರು.

ಎಚ್‌ಐವಿ ಪೀಡಿತರ ಆರೈಕೆಯಲ್ಲಿ ಅವಿರತವಾಗಿ ಸೇವೆ ನೀಡಿದ ಸ್ನೇಹದೀಪ ಮಂಗಳೂರು ಸಂಸ್ಥೆಯ ಮುಖ್ಯಸ್ಥೆ ತಬಸ್ಸುಮ್, ಮನಪಾ ಉಪ ಮೇಯರ್ ಸುಮಂಗಲಾ ಅವರನ್ನು ಸಂಸ್ಥೆಯ ಪರವಾಗಿ ಮುಖ್ಯ ಅತಿಥಿಗಳು ಸನ್ಮಾನಿಸಿ, ಗೌರವಿಸಿದರು.

ಕಾರ್ಯಕ್ರಮದಲ್ಲಿ ಮೂಡುಶೆಡ್ಡೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವೆರೊನಿಕಾ ರೊಡ್ರಿಗಸ್, ಸಿಟಿಗೋಲ್ಡ್ ಸಂಸ್ಥೆಯ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ., ಸಂಸ್ಥೆಯ ಸಿಬ್ಬಂದಿ, ಗ್ರಾಹಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News