×
Ad

ತೆಲಂಗಾಣ:ಎರಡು ಗುಂಪುಗಳ ನಡುವೆ ಘರ್ಷಣೆ; 12 ಜನರಿಗೆ ಗಾಯ, ಹಲವು ವಾಹನಗಳಿಗೆ ಬೆಂಕಿ

Update: 2021-03-08 20:04 IST
ಸಾಂದರ್ಭಿಕ ಚಿತ್ರ

ಹೈದರಾಬಾದ್,ಮಾ.8: ಬೈಕ್ ಸವಾರರಿಬ್ಬರ ನಡುವಿನ ಬೀದಿ ಜಗಳ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಓರ್ವ ಪೊಲೀಸ್ ಮತ್ತು ಪತ್ರಕರ್ತ ಸೇರಿದಂತೆ 12 ಜನರು ಗಾಯಗೊಂಡಿರುವ ಘಟನೆ ರವಿವಾರ ರಾತ್ರಿ ತೆಲಂಗಾಣದ ನಿರ್ಮಲ ಜಿಲ್ಲೆಯ ಭೈಂಸಾದಲ್ಲಿ ನಡೆದಿದೆ. ಉಭಯ ಗುಂಪುಗಳು ಪರಸ್ಪರ ಕಲ್ಲುತೂರಾಟ ನಡೆಸಿದ್ದು,ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪಟ್ಟಣದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು,50 ಜನರನ್ನು ಬಂಧಿಸಿರುವ ಪೊಲೀಸರು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ತಾನು ಪರಿಸ್ಥಿತಿಯ ಮೇಲೆ ಖುದ್ದಾಗಿ ನಿಗಾಯಿರಿಸಿದ್ದು,ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಿತಿಯು ನಿಯಂತ್ರಣದಲ್ಲಿದೆ ಎಂದು ತೆಲಂಗಾಣ ಗೃಹಸಚಿವ ಮುಹಮ್ಮದ್ ಮಹಮೂದ್ ಅಲಿ ಅವರು ಸೋಮವಾರ ಇಲ್ಲಿ ತಿಳಿಸಿದರು.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ತನಗೆ ಕರೆ ಮಾಡಿ ಹಿಂಸಾಚಾರದ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಸಹಾಯಕ ಗೃಹಸಚಿವ ಕಿಶನ್ ರೆಡ್ಡಿ ಅವರು ಟ್ವೀಟಿಸಿದ್ದಾರೆ.

ಈ ಕೋಮು ಘರ್ಷಣೆಗಳ ಹಿಂದೆ ನಗರಸಭೆಯ ಆಡಳಿತಾರೂಢ ಎಐಎಂಐಎಂ ಕೈವಾಡವಿದೆ. ಅವರು ಭೈಂಸಾದಿಂದ ಹಿಂದುಗಳನ್ನು ಓಡಿಸಲು ಬಯಸಿದ್ದಾರೆ. ಸೂತ್ರದ ಬೊಂಬೆಯಾಗಿರುವ ಟಿಆರ್‌ಎಸ್ ಸರಕಾರವು ಈ ಭೀಕರ ಘಟನೆಗಳ ಮೂಕಪ್ರೇಕ್ಷಕನಾಗಿದೆ ಎಂದು ನಿಝಾಮಾಬಾದ್‌ನ ಬಿಜೆಪಿ ಸಂಸದ ಅರವಿಂದ ಧರ್ಮಪುರಿ ಆರೋಪಿಸಿದರು.

ತನ್ಮಧ್ಯೆ,ಹಿಂಸಾಚಾರದಲ್ಲಿ ಭಾಗಿಯಾಗಿದ್ದ ದುಷ್ಕರ್ಮಿಗಳಿಗೆ ಎಚ್ಚರಿಕೆ ನೀಡಿರುವ ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಅವರು,ರಾಜ್ಯ ಸರಕಾರವು ಅರಾಜಕತೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News