ಪೇಜಾವರ ನೆನಪಿನಲ್ಲಿ ಸ್ಮೃತಿವನ ನಿರ್ಮಾಣಕ್ಕೆ 2 ಕೋಟಿ ರೂ. : ಬಜೆಟ್‌ನಲ್ಲಿ ಸಿಎಂ ಘೋಷಣೆ

Update: 2021-03-08 14:38 GMT

ಉಡುಪಿ, ಮಾ.8: ಕರಾವಳಿ ಜಿಲ್ಲೆಗಳಲ್ಲಿ ಪರಿಸರ ಹಾಗೂ ಜೀವವೈವಿಧ್ಯತೆ ಸಂರಕ್ಷಣೆಗೆ ಸದಾ ಮುಂಚೂಣಿಯಲ್ಲಿರುತಿದ್ದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರ ಸ್ಮರಣೆಯಲ್ಲಿ ‘ಪೇಜಾವರ ಸ್ಮೃತಿವನ’ವೊಂದನ್ನು ಉಡುಪಿಯಲ್ಲಿ ನಿರ್ಮಿಸಲು ಎರಡು ಕೋಟಿ ರೂ.ವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಇದಕ್ಕೆ ಬೇಕಾದ ಜಾಗವನ್ನು ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸೇರಿ ನಿರ್ಧರಿಸಲಿದೆ. ಇದು ನೈಸರ್ಗಿಕ ಗಿಡಮರಗಳನ್ನು ಉಳಿಸಿಕೊಂಡು ಬೆಳೆಸುವ ಜೀವವೈವಿಧ್ಯತೆಯ ವನವಾಗಲಿದೆ. ಕಳೆದ ಫೆ.20ರಂದು ಉಡುಪಿ ಜಿಲ್ಲೆಗೆ ಆಗಮಿಸಿದ್ದ ಕರ್ನಾಟಕ ಜೀವವೈವಿದ್ಯ ಮಂಡಳಿಯ ಅಧ್ಯಕ್ಷ ಹಾಗೂ ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಈ ಬಗ್ಗೆ ತಿಳಿಸಿದ್ದು, ಈ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಇದನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದ್ದರು.
ಇದರೊಂದಿಗೆ ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಜಿಲ್ಲೆಯ ತ್ರಾಸಿ, ಮರವಂತೆ, ಒತ್ತಿನೆಣೆ ಹಾಗೂ ಇತರ ಕಡಲ ತೀರಗಳನ್ನು ಅಂತಾರಾಷ್ಟ್ರೀಯ ದರ್ಜೆ ಗೇರಿಸಲು 10 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಹಾಗೂ ಬೈಂದೂರು ತಾಲೂಕು ಸೋಮೇಶ್ವರ ಕಡಲತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ತೆಗೆದಿರಿಸಲಾಗಿದೆ.

ಇವುಗಳಲ್ಲಿ ತ್ರಾಸಿ-ಮರವಂತೆಯಲ್ಲಿರುವ ಪ್ರವಾಸಿ ಮಂದಿರವನ್ನು ಮೇಲ್ದರ್ಜೆ ಗೇರಿಸುವುದು, ಪ್ರವಾಸಿಗಳ ಆಕರ್ಷಿಸಲು ವಿವಿಧ ರೀತಿಯ ಅಭಿವೃದ್ಧಿ, ಫುಡ್‌ಕೋರ್ಟ್, ವಾಕಿಂಗ್ ಟ್ರಾಕ್‌ಗಳ ನಿರ್ಮಾಣಗಳು ಸೇರಿವೆ. ಈ ಬಗ್ಗೆ ವಿವರವಾದ ಪ್ರಸ್ತಾಪವನ್ನು ಮಂಡಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.

ಅಲ್ಲದೇ ಯಾಂತ್ರೀಕೃತ ದೋಣಿಗಳಿಗೆ ಸಿಗುವ 1.5 ಲಕ್ಷ ಕಿಲೋಲೀ. ಡೀಸೆಲ್ ಮೇಲಿನ ಮಾರಾಟ ಕರ ವಿನಾಯಿತಿಯನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರ ಮರುಪಾವತಿಸುವ ಬದಲು ಡೀಸೆಲ್ ಸರಬರಾಜು ಪಾಯಿಂಟ್‌ನಲ್ಲೇ ಕರರಹಿತ ದರದಲ್ಲಿ ಡೀಸೆಲ್ ವಿತರಣೆಗೆ ಘೋಷಣೆಯ ಲಾಭ ಉಡುಪಿಯ ದೊಡ್ಡ ಸಂಖ್ಯೆಯ ಮೀನುಗಾರರಿಗೂ ಲಭಿಸಲಿದೆ.

ಉಡುಪಿಯಿಂದ ಬಜೆಟ್ ಪ್ರತಿಕ್ರಿಯೆಗಳು

ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ : ಆರ್ಥಿಕ ಸ್ಥಿತಿಗತಿಯ ಬಗ್ಗೆ, ಕಾರ್ಯಕ್ರಮಗಳ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಮಾಹಿತಿ ಇಲ್ಲ. ಅಭಿವೃದ್ಧಿಗೆ ಪೂರಕವಾಗುವ ಯಾವುದೇ ಯೋಜನೆಗಳಿಲ್ಲ. ಇಲಾಖಾವಾರು ಅನುದಾನದ ಬಿಡುಗಡೆಯ ಮಾಹಿತಿ ಬಜೆಟ್‌ನಲ್ಲಿ ನೀಡಿಲ್ಲ. ಸರಕಾರದ ಸಾಲದ ಹೊರೆ 3,97,680 ಕೋಟಿಯತ್ತ ಸಾಗಿದೆ. ಹೀಗಾಗಿ ಸರಕಾರ ಸಾಲದ ಹೊರೆಯಲ್ಲೇ ನಡೆಯು ವಂತಾಗಿದೆ. ಬೆಲೆ ಇಳಿಕೆಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಜೆಟ್‌ನಲ್ಲಿ ಸರಕಾರದ ಜನವಿರೋಧಿ ನೀತಿಯ ಅನಾವರಣವಾಗಿದೆ. - ಅಶೋಕ್ ಕುಮಾರ್ ಕೊಡವೂರು, ಅಧ್ಯಕ್ಷ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ.

ಅಭಿವೃದ್ಧಿ ಪರ ಬಜೆಟ್ : ವಿಶ್ವ ಮಹಿಳಾ ದಿನಾಚರಣೆಯ ದಿನದಂದು ಮಂಡಿಸಲ್ಪಟ್ಟ ಈ ಬಾರಿಯ ರಾಜ್ಯ ಬಜೆಟ್ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ, ಮಹಿಳಾ ಮತ್ತು ರೈತ ಪರ ಬಜೆಟ್. ಮಹಿಳೆಯರಿಗೆ 6 ತಿಂಗಳ ಹೆಚ್ಚುವರಿ ಹೆರಿಗೆ ರಜೆ, ಮಹಿಳಾ ಕಾರ್ಮಿಕರಿಗೆ ಬಿಎಂಟಿಸಿ ರಿಯಾಯಿತಿ ಪ್ರಯಾಣ, ಎಪಿಎಂಸಿಯಲ್ಲಿ ಮಹಿಳಾ ಮೀಸಲಾತಿ, ಮಹಿಳಾ ಸುರಕ್ಷತೆಗೆ ವಿಶೇಷ ಕ್ರಮ, 2 ಕೋಟಿ ಮಹಿಳೆಯರಿಗೆ ಸ್ವೋದ್ಯೋಗಕ್ಕಾಗಿ ಶೇ.4 ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮುಂತಾದ ಹಲವು ಘೋಷಣೆಗಳೊಂದಿಗೆ ಮಹಿಳಾ ಪರ ಬಜೆಟ್.

ಯಾಂತ್ರೀಕೃತ ದೋಣಿಗಳಿಗೆ 1.50 ಲಕ್ಷ ಕಿ.ಲೀ. ಡಿಸೀಲ್ ಮನ್ನಾ ಮಾರಾಟ ತೆರಿಗೆ ಮರುಪಾವತಿಯ ಬದಲು, ಡಿಸೀಲ್ ಡೆಲಿವರಿ ಕೇಂದ್ರದಲ್ಲಿ ಕರ ರಹಿತ ಡಿಸೀಲ್ ವಿತರಣೆಗೆ ಅನುಮೋದನೆ ನೀಡಿರುವುದು ಕರಾವಳಿಯ ಮೀನುಗಾರ ವರ್ಗಕ್ಕೆ ಖುಷಿ ತಂದಿದೆ. ಯಾವುದೇ ಹೊಸ ತೆರಿಗೆಯನ್ನು ವಿಧಿಸದೆ ಮೂಲಭೂತ ಸೌಕರ್ಯಕ್ಕೆ ಆಧ್ಯತೆ ನೀಡಿದ ಬಜೆಟ್. ಆಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣ, ಜಿಲ್ಲೆಗೊಂದು ಗೋಶಾಲೆ ಮುಂತಾದ ಯೋಜನೆಗಳೊಂದಿಗೆ ಆರೋಗ್ಯ ಕ್ಷೇತ್ರಕ್ಕೂ ವಿಶೇಷ ಒತ್ತು ನೀಡಿದ ದೂರದರ್ಶಿತ್ವದ ಅಭಿವೃದ್ಧಿ ಪರ ಬಜೆಟ್. -ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಉಡುಪಿ

ಹೊಸ ಯೋಜನೆಗಳಿಲ್ಲದ ನೀರಸ ಬಜೆಟ್ : ಈಗಾಗಲೇ ಸರಕಾರದ ಆರ್ಥಿಕ ನೀತಿಗಳಿಂದ ಜನತೆಯ ಜೇಬಿಗೆ ಕತ್ತರಿ ಪ್ರಯೋಗವಾಗಿರುವುದರಿಂದ ಇನ್ನಷ್ಟು ಕತ್ತರಿ ಪ್ರಯೋಗವಿಲ್ಲದಿರುವುದೇ ಸಮಾಧಾನದ ಸಂಗತಿ. ಆರ್ಥಿಕ ಸಂಕಷ್ಟ ಎನ್ನುತ್ತಾ ಜಾತಿವಾರು ನಿಗಮಗಳಿಗೆ ಅನುದಾನ ಬಿಡುಗಡೆಗೊಳಿಸಿ ಮೀಸಲಾತಿ ಕೂಗನ್ನು ಅಡಗಿಸುವ ಪ್ರಯತ್ನ ನಡೆದಿದೆ. ತೆರಿಗೆ ಹೆಚ್ಚಳ ಮಾಡಿಲ್ಲ ಎನ್ನುವುದೇ ಹೆಗ್ಗಳಿಕೆಯಾದರೆ ಸಂಕಷ್ಟದಲ್ಲಿರುವ ಜನ ಸಾಮಾನ್ಯರ ಹೊರೆಯನ್ನು ಕಡಿತಗೊಳಿಸದೆ ಇರುವುದು ಹೆಗ್ಗಳಿಕೆಯಾಗುವುದೇ? ತೈಲ ತೆರಿಗೆ ಕಡಿತಗೊಳಿಸುವ ನಿರೀಕ್ಷೆ ಹುಸಿಯಾಗಿದೆ. -ಭಾಸ್ಕರ್ ರಾವ್ ಕಿದಿಯೂರು, ವಕ್ತಾರರು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ.

ಮೀನುಗಾರರಿಗೆ ಸಂತಸ ತಂದ ಬಜೆಟ್ : ಮೀನುಗಾರರ ಬಹುದಿನಗಳ ಬೇಡಿಕೆ ಡೀಸೆಲ್ ಪಾಯಿಂಟ್ನಲ್ಲಿಯೇ ಕರ ರಹಿತ ಡೀಸೆಲ್ ವಿತರಣೆಗೆ ಬಜೆಟ್ನಲ್ಲಿ ನಿರ್ಧರಿಸುವ ಮೂಲಕ ಮುಖ್ಯಮಂತ್ರಿಗಳು ಮೀನುಗಾರರಿಗೆ ಆರ್ಥಿಕ ಚೈತನ್ಯ ತುಂಬಿದ್ದಾರೆ. ಮೀನು ಮಾರಾಟ ಘಟಕ, ಮತ್ಸ್ಯದರ್ಶಿನಿಗಳ ಸ್ಥಾಪನೆಗೆ 30 ಕೋಟಿ, ಮೀನು ಉತ್ಪನ್ನಗಳ ಸಂಸ್ಕರಣಾ ಕೇಂದ್ರ ಸ್ಥಾಪನೆ, ಮತ್ಸ್ಯ ಸಂಪದ ಯೋಜನೆ ಅನುಷ್ಠಾನಕ್ಕೆ 62 ಕೋಟಿ ಹಾಗೂ ಬಂದರು ಸಂಪರ್ಕ ರಸ್ತೆಗೆ 100 ಕೋಟಿ ಮೀಸಲಿಡುವ ಮೂಲಕ ರಾಜ್ಯದ ಮೀನುಗಾರಿಕೆ ಸಮಗ್ರ ಅಭಿವೃದ್ಧಿಗೆ ಪೂರಕ ಬಿಜೆಟ್ ಇದಾಗಿದೆ. -ಯಶ್‌ಪಾಲ್ ಸುವರ್ಣ, ಅಧ್ಯಕ್ಷ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿ. ಮಂಗಳೂರು.

ಹೊಸತನವಿಲ್ಲದ ನೀರಸ ಬಜೆಟ್ : ರಾಜ್ಯ ಸರಕಾರ ಪೆಟ್ರೊಲ್, ಡೀಸೆಲ್ ಮೇಲಿನ ಸೆಸ್ ಇಳಿಸಬಹುದಿತ್ತು. ನೀರಾವರಿ, ಕೃಷಿಗೆ ಏನು ಹೆಚ್ಚಿನ ಅನುದಾನ ನೀಡಿಲ್ಲ. ದಿನಬಳಕೆ ವಸ್ತುಗಳ ದರ ಇಳಿಕೆಗೆ ಯಾವುದೇ ಯೋಜನೆಗಳಿಲ್ಲ. ಉದ್ಯೊಗ ಸೃಷ್ಟಿಗೆ ಒತ್ತು ನೀಡಿಲ್ಲ. ಹೀಗಾಗಿ ಇದೊಂದು ಹೊಸತನವಿಲ್ಲದ ನಿರಾಶಾದಾಯಕ ರಾಜ್ಯ ಬಜೆಟ್.  -ಯೋಗೀಶ್ ವಿ.ಶೆಟ್ಟಿ, ಅಧ್ಯಕ್ಷ ಉಡುಪಿ ಜಿಲ್ಲಾ ಜೆಡಿಎಸ್.

ಹೆಚ್ಚಿನ ತೆರಿಗೆ ವಿಧಿಸದಿರುವುದೇ ಹೆಚ್ಚುಗಾರಿಕೆ : ಕೊರೋನದಿಂದ ಆದ ಆರ್ಥಿಕ ಹೊಡೆತದ ಮಧ್ಯದಲ್ಲಿ ಯಾವುದೇ ಹೆಚ್ಚಿನ ತೆರಿಗೆಯನ್ನು ವಿಧಿಸದೇ ಬಜೆಟ್ ಮಂಡಿಸಿರುವುದು ವಿಶೇಷ. ಆದರೆ ಜಾತಿ ಧರ್ಮಗಳ ನಿಗಮಗಳ ಹೆಸರಿನಲ್ಲಿ ಬಜೆಟ್‌ನಲ್ಲಿ ಹಣ ವಿಂಗಡಿಸುವುದು ರಾಜ್ಯದ ಸಮಗ್ರ ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ ಲಕ್ಷಣವಲ್ಲ. ವಿರೋಧ ಪಕ್ಷಗಳು ಬಜೆಟ್ ಮಂಡನೆಯ ಸಂದರ್ಭದಲ್ಲಿ ಅನೈತಿಕ ಸರಕಾರ ಎಂಬ ಕಾರಣ ನೀಡಿ ಅಧಿವೇಶನ ಬಹಿಷ್ಕಾರ ಮಾಡಿರುವುದು ಅತ್ಯಂತ ಕೆಟ್ಟ ಸಂಪ್ರದಾಯ. ಸಭೆಯಲ್ಲಿ ಕೂತು ಚರ್ಚೆ ಮಾಡಬೇಕಾಗಿರುವುದು ಅವರ ಪ್ರಮುಖ ಜವಾಬ್ದಾರಿಯೂ ಹೌದು. ಕಳೆದ ವರ್ಷದ ಬಜೆಟ್ ಪರಾಮರ್ಶೆ ಮೊದಲು ನಡೆದು ನೂತನ ಬಜೆಟ್ ಮಂಡಿಸುವ ವಿಧಾನ ಅಳವಡಿಸಿದಾಗ ಮುಂದಿನ ವಾರ್ಷಿಕ ಆಯವ್ಯಯದ ಬಗ್ಗೆ ಜನರಲ್ಲಿ ಹೆಚ್ಚು ವಿಶ್ವಾಸ ಮೂಡಿಬರುತ್ತದೆ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ರಾಜಕೀಯ ವಿಶ್ಲೇಷಕ ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News