ಅಲನ್ ಕುರ್ದಿಯ ತಂದೆಯನ್ನು ಭೇಟಿಯಾದ ಪೋಪ್ ಫ್ರಾನ್ಸಿಸ್

Update: 2021-03-08 15:17 GMT
ಪೋಟೊ ಕೃಪೆ: twitter.com

ಅರ್ಬಿಲ್ (ಇರಾಕ್), ಮಾ. 8: ಹಿಂಸಾಪೀಡಿತ ತಾಯ್ನೆಲವನ್ನು ತೊರೆದು ನೆಮ್ಮದಿಯ ಬದುಕನ್ನು ಅರಸುತ್ತಾ ಯುರೋಪ್‌ಗೆ ವಲಸೆ ಹೋಗುತ್ತಿದ್ದ ವೇಳೆ ಸಮುದ್ರದಲ್ಲಿ ಮುಳುಗಿರುವ ಸಿರಿಯದ ಮಗು ಅಲನ್ ಕುರ್ದಿಯ ತಂದೆಯನ್ನು ಪೋಪ್ ಫ್ರಾನ್ಸಿಸ್ ರವಿವಾರ ರಾತ್ರಿ ಭೇಟಿಯಾದರು.

 2015ರಲ್ಲಿ ಮೂರು ವರ್ಷದ ಅಲನ್‌ನ ಪುಟ್ಟ ದೇಹ ಟರ್ಕಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದ್ದು, ಮಗುವಿನ ದುರಂತ ಸಾವಿಗೆ ಇಡೀ ಜಗತ್ತು ಕಂಬನಿ ಮಿಡಿದಿತ್ತು.

ಇರಾಕ್ ಪ್ರವಾಸದಲ್ಲಿದ್ದ ಪೋಪ್ ಫ್ರಾನ್ಸಿಸ್ ರವಿವಾರ ತನ್ನ ಕೊನೆಯ ಸಾರ್ವಜನಿಕ ಕಾರ್ಯಕ್ರಮವನ್ನು ಮುಗಿಸಿ, ಇರಾಕ್‌ನ ಉತ್ತರ ಕುರ್ದಿಸ್ತಾನ್ ವಲಯದ ರಾಜಧಾನಿ ಅರ್ಬಿಲ್‌ನಲ್ಲಿ ಅಲನ್‌ನ ತಂದೆ ಅಬ್ದುಲ್ಲಾರನ್ನು ಭೇಟಿಯಾದರು.

‘‘ಅಬ್ದುಲ್ಲಾ ಕುರ್ದಿಯೊಂದಿಗೆ ಪೋಪ್ ತುಂಬಾ ಸಮಯ ಮಾತನಾಡಿದರು. ತನ್ನ ಕುಟುಂಬವನ್ನು ಕಳೆದುಕೊಂಡ ತಂದೆಯೊಬ್ಬರ ನೋವನ್ನು ಆಲಿಸಿದರು’’ ಎಂದು ಪೋಪ್‌ರ ಕೇಂದ್ರಸ್ಥಾನ ವ್ಯಾಟಿಕನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಕುರ್ದಿ ಕುಟುಂಬದ ಮೂಲವು ಉತ್ತರ ಸಿರಿಯದ ಕೊಬಾನೆಯಾಗಿದೆ. ಸಿರಿಯದಲ್ಲಿ ಸಂಘರ್ಷ ತಾರಕಕ್ಕೇರಿದಾಗ ಕೆನಡದಲ್ಲಿ ನೆಲೆಸುವ ಕನಸಿನೊಂದಿಗೆ ತಂದೆ, ತಾಯಿ, ಅಣ್ಣನೊಂದಿಗೆ ಅಲನ್ 2015 ಸೆಪ್ಟಂಬರ್ 2ರಂದು ಸಮುದ್ರ ದಾಟುತ್ತಿದ್ದಾಗ ಸಣ್ಣ ದೋಣಿ ಮಗುಚಿತು. ದುರಂತದಲ್ಲಿ ಅಲನ್, ತಾಯಿ ಮತ್ತು ಅಣ್ಣ ಮೃತಪಟ್ಟರು. ಬದುಕುಳಿದ ಅಬ್ದುಲ್ಲಾ ಈಗ ಉತ್ತರ ಇರಾಕ್‌ನಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News