ತೃಣಮೂಲ ಕಾಂಗ್ರೆಸ್‌ನ ಐವರು ಶಾಸಕರು ಬಿಜೆಪಿಗೆ ಸೇರ್ಪಡೆ

Update: 2021-03-08 15:49 GMT

ಕೋಲ್ಕತಾ, ಮಾ. 8: ಸೋಮವಾರ ನಡೆದ ಪ್ರಮುಖ ಬೆಳವಣಿಗೆಯೊಂದರಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಐವರು ಹಾಲಿ ಶಾಸಕರು ಬಿಜೆಪಿಯ ರಾಜ್ಯ ಘಟಕದ ವರಿಷ್ಠ ದಿಲೀಪ್ ಘೋಷ್ ಹಾಗೂ ನಾಯಕ ಸುವೇಂದು ಅಧಿಕಾರಿ ಅವರ ಸಮ್ಮುಖದಲ್ಲಿ ಕೋಲ್ಕತ್ತಾದಲ್ಲಿ ಬಿಜೆಪಿ ಸೇರಿದ್ದಾರೆ.

ತೃಣಮೂಲ ಕಾಂಗ್ರೆಸ್ ಶಾಸಕರಾದ ಸೋನಾಲಿ ಗುಹಾ, ಶೀತಲ್ ಸರ್ದಾರ್, ದೀಪೇಂದು ಬಿಸ್ವಾಸ್, ರಬೀಂದ್ರನಾಥ್ ಭಟ್ಟಾಚಾರ್ಯ ಹಾಗೂ ಜಾತು ಲಹರಿ ಕೋಲ್ಕತ್ತಾದಲಿ ಸೋಮವಾರ ಬಿಜೆಪಿ ಸೇರಿದರು. ಟಿಎಂಸಿಯ ಮಾಜಿ ನಾಯಕಿ ಸರಳಾ ಮುರ್ಮು ಬಿಜೆಪಿಗೆ ಸೇರಿದ್ದರು.

ಅನಾರೋಗ್ಯದ ಕಾರಣದಿಂದ ಸರಳಾ ಮುರ್ಮು ಅವರನ್ನು ವಿಧಾನ ಸಭೆ ಅಭ್ಯರ್ಥಿ ಸ್ಥಾನದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರಿದ್ದಾರೆ. ಆರಂಭದಲ್ಲಿ ಪಶ್ಚಿಮಬಂಗಾಳ ವಿಧಾನ ಸಭೆ ಚುನಾವಣೆಯ ಟಿಎಂಸಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಬೀಬ್‌ಪುರ ಕ್ಷೇತ್ರದಿಂದ ಸರಳಾ ಮುರ್ಮು ಸ್ಫರ್ದಿಸುವುದಾಗಿ ಘೋಷಿಸಲಾಗಿತ್ತು. ಆದರೆ, ಟಿಎಂಸಿ ಸೋಮವಾರ ಹಬೀಬ್‌ಪುರ ಅಭ್ಯರ್ಥಿಯಾಗಿ ಸರಳಾ ಮುರ್ಮು ಅವರ ಬದಲು ಪ್ರದೀಪ್ ಭಾಸ್ಕರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಸರಳಾ ಮುರ್ಮು ಅವರಿಗೆ ಆರೋಗ್ಯದ ಸಮಸ್ಯೆ ಇದೆ ಎಂದು ಅದು ಹೇಳಿದೆ. ಟಿಎಂಸಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರ ಆಪ್ತೆ ಹಾಗೂ ನಾಲ್ಕು ಬಾರಿ ಪಕ್ಷದ ಶಾಸಕಿಯಾಗಿದ್ದ ಸೋನಾಲಿ ಗುಹಾ ಶನಿವಾರ ಬಿಜೆಪಿ ಸೇರುವ ಸೂಚನೆ ನೀಡಿದ್ದರು. ಅವರು ಕೂಡ ಬಿಜೆಪಿ ಸೇರಿದ್ದಾರೆ. ಟಿಎಂಸಿಯ ಹಿರಿಯ ನಾಯಕ ರಬೀಂದ್ರನಾಥ್ ಭಟ್ಟಾಚಾರ್ಜಿ ಸಿಂಗೂರಿನ ಶಾಸಕ. ಆದರೆ, ಅವರಿಗೆ 85 ವರ್ಷ ಆಗಿದೆ ಎಂಬ ಕಾರಣಕ್ಕೆ ಟಿಕೆಟ್ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರಿದ್ದಾರೆ. ಶಿಬ್‌ಪುರದ ಟಿಎಂಸಿನ ಶಾಸಕ 84 ವರ್ಷದ ಜತ್ತು ಲಹಿರಿ ಕೂಡ ಬಿಜೆಪಿಗೆ ಸೇರಿದ್ದಾರೆ. ಪ್ರಾಯದ ಕಾರಣಕ್ಕಾಗಿ ಟಿಎಂಸಿ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News