ವರದಕ್ಷಿಣೆ ಪ್ರಕರಣದ ಕುರಿತು ದೂರು ನೀಡಲು ತೆರಳಿದ್ದಾಗ ಅತ್ಯಾಚಾರ; ಠಾಣಾಧಿಕಾರಿ ವಿರುದ್ಧ ಮಹಿಳೆಯ ಆರೋಪ

Update: 2021-03-08 16:52 GMT

ಜೈಪುರ, ಮಾ.8: ದೂರು ನೀಡಲು ಬಂದ ತನ್ನ ಮೇಲೆ ಠಾಣಾಧಿಕಾರಿ ಪೊಲೀಸ್ ಠಾಣೆಯ ಆವರಣದಲ್ಲಿರುವ ಕೋಣೆಯಲ್ಲಿ 3 ದಿನ ಅತ್ಯಾಚಾರ ಎಸಗಿರುವುದಾಗಿ 26 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ರಾಜಸ್ತಾನದ ಅಲ್ವಾರ್ ಜಿಲ್ಲೆಯ ಠಾಣೆಯಲ್ಲಿ ಈ ಪ್ರಕರಣ ನಡೆದಿದೆ. ಪೊಲೀಸ್ ಠಾಣೆಯ ಕಂಪೌಂಡಿನಲ್ಲಿರುವ ಕೋಣೆಯಲ್ಲೇ ಆರೋಪಿ ಎಸ್‌ಐ ವಾಸಿಸುತ್ತಿದ್ದರು. ವರದಕ್ಷಿಣೆ ಹಿಂಸೆ ಮತ್ತು ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿ ತನ್ನ ಪತಿಯ ವಿರುದ್ಧ ದೂರು ದಾಖಲಿಸಲು ಮಹಿಳೆ ಎಸ್‌ಐಯನ್ನು ಸಂಪರ್ಕಿಸಿದಾಗ ಸಹಾಯ ಮಾಡುವ ನೆಪದಲ್ಲಿ ಆತ ಮಾರ್ಚ್ 2ರಿಂದ 4ರವರೆಗೆ 3 ದಿನ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ದೂರು ನೀಡಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಿಳೆ 2018ರಲ್ಲಿ ಪತಿಯ ವಿರುದ್ಧ ವರದಕ್ಷಿಣೆಗಾಗಿ ಕಿರುಕುಳ ಪ್ರಕರಣ ದಾಖಲಿಸಿದ್ದು ಬಳಿಕ ಮಾತುಕತೆ ಮೂಲಕ ವಿವಾದ ಇತ್ಯರ್ಥವಾಗಿತ್ತು. ಆದರೆ ಈಗ ಪತಿ ತನಗೆ ವಿಚ್ಛೇದನ ನೀಡುವ ಪ್ರಸ್ತಾವ ಮುಂದುವರಿಸಿದ್ದು ಇದನ್ನು ವಿರೋಧಿಸಿದ್ದಕ್ಕೆ ಬೆದರಿಕೆ ಹಾಕುತ್ತಿದ್ದಾನೆ ಎಂದು ತಾನು ದೂರು ನೀಡಲು ಠಾಣೆಗೆ ಆಗಮಿಸಿದ್ದಾಗ ಠಾಣಾಧಿಕಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News