ಉಡುಪಿ ಜಿಲ್ಲೆಯ 18 ಮಂದಿಯಲ್ಲಿ ಕೋವಿಡ್ ಸೋಂಕು

Update: 2021-03-08 16:07 GMT

ಉಡುಪಿ, ಮಾ.8: ಜಿಲ್ಲೆಯಲ್ಲಿ ಸೋಮವಾರ ಒಟ್ಟು 18 ಮಂದಿ ಕೊರೋನ ಸೋಂಕಿಗೆ ತುತ್ತಾಗಿದ್ದಾರೆ. ದಿನದಲ್ಲಿ ಆರು ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆ 113ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

ಇಂದು ಪಾಸಿಟಿವ್ ಬಂದವರಲ್ಲಿ 11 ಮಂದಿ ಪುರುಷರಾದರೆ ಏಳು ಮಂದಿ ಮಹಿಳೆಯರು. ಇವರಲ್ಲಿ 13 ಮಂದಿ ಉಡುಪಿ ತಾಲೂಕಿನವರಾದರೆ, ಮೂವರು ಕುಂದಾಪುರ ಹಾಗೂ ಇಬ್ಬರು ಕಾರ್ಕಳ ತಾಲೂಕಿನವರು. ರವಿವಾರ ಆರು ಮಂದಿ ಸೋಂಕಿ ನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 23,432ಕ್ಕೇರಿದೆ.

1224 ಮಂದಿ ನೆಗೆಟಿವ್: ರವಿವಾರ ಜಿಲ್ಲೆಯ 1242 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಇವರಲ್ಲಿ 1224 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಉಳಿದ 18 ಮಂದಿಯಲ್ಲಿ (ಐಸಿಎಂಆರ್ ವರದಿ) ಸೋಂಕು ಪತ್ತೆಯಾಗಿದೆ. ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,735 ಆಗಿದೆ ಎಂದು ಡಾ.ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 3,77,188 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಇವರಲ್ಲಿ 3,53,453 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್‌ಗೆ ಯಾರೂ ಬಲಿಯಾಗಿಲ್ಲ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆ 190 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News