ಕೋಸ್ಟಲ್ ಬರ್ತ್ ಯೋಜನೆ ವಿರೋಧಿಸಿ ಬೆಂಗರೆಯಲ್ಲಿ ಪ್ರತಿಭಟನೆ
ಮಂಗಳೂರು, ಮಾ.8: ಮುಸ್ಲಿಮರ ದಫನ್ ಭೂಮಿ, ಬೆಂಗ್ರೆಯ ಮೀನುಗಾರರು, ಸರಕಾರಿ ಶಾಲೆಯ ಭೂಮಿ ಮತ್ತು ಗ್ರಾಮಸ್ಥರ ಬದುಕು ಏಕಕಾಲಕ್ಕೆ ಕಬಳಿಸುತ್ತಿರುವ ಆರೋಪ ಹೊತ್ತಿರುವ ಸಾಗರ ಮಾಲಾ ಯೋಜನೆಯ ಕೋಸ್ಟಲ್ ಬರ್ತ್ ಯೋಜನೆ ರದ್ದುಪಡಿಸಲು ಒತ್ತಾಯಿಸಿ ಬೆಂಗರೆ ಕೋಸ್ಟಲ್ ಬರ್ತ್ ಯೋಜನಾ ಸ್ಥಳದ ಬಳಿ ಬೆಂಗರೆ ಜಮಾತ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಾಭಾಗಿತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಮಂಗಳೂರು ಹಳೆ ಬಂದರಿನ ಧಾರಣಾ ಸಾಮರ್ಥ್ಯಕ್ಕಿಂತ ಅಧಿಕ ಯೋಜನೆಗಳನ್ನು ಹಳೆ ಬಂದರಿನ ಸುತ್ತಮುತ್ತಲಿನ ನದಿ ದಂಡೆಗಳ ಮೇಲೆ ತಂದು ಹಾಕಲಾಗು ತ್ತಿದೆ. ಇದರಿಂದಾಗಿ ಮೀನುಗಾರಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದರು.
ಬಡ ಜನರೇ ಬಹುಸಂಖ್ಯೆಯಲ್ಲಿರುವ ಬೆಂಗರೆಯ ಜನರಿಗೆ ಹಕ್ಕುಪತ್ರ ಸಹಿತ ಮೂಲಭೂತ ಸೌಕರ್ಯಗಳಿಂದ ವಂಚಿಸಲಾಗು ತ್ತಿದೆ. ದಫನ ಭೂಮಿ ಮತ್ತು ಬಡವರ ಮಕ್ಕಳು ಕಲಿಯುವ ಸರಕಾರಿ ಶಾಲೆಯ ಭೂಮಿಯೂ ಕೋಸ್ಟಲ್ ಬರ್ತ್ ಯೋಜನೆಯ ಪಾಲಾದರೆ ಬೆಂಗರೆಯ ಜನತೆ ಕಷ್ಟದ ದಿನಗಳನ್ನು ಎದುರಿಸಬೇಕಾದೀತು ಎಂದು ಆತಂಕ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಕೂಡಲೇ ಯೋಜನೆಯನ್ನು ಕೈಬಿಡಲು ಕೂಡ ಈ ಸಂದರ್ಭ ಅವರು ಒತ್ತಾಯಿಸಿದರು.
ಮನಪಾ ಸ್ಥಳೀಯ ಕಾರ್ಪೊರೇಟರ್ ಮುನೀಬ್ ಬೆಂಗ್ರೆ, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್, ನಾಡದೋಣಿ ಮೀನುಗಾರರ ಸಂಘದ ಮುಖಂಡ ತಯ್ಯೂಬ್ ಬೆಂಗರೆ, ಬಿಲಾಲ್ ಮೊಯಿದಿನ್ ಮಾತನಾಡಿದರು. ಬೆಂಗರೆ ಜಮಾತ್ ಅಧ್ಯಕ್ಷ ಅಸ್ಲಾಂ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐ ಬೆಂಗ್ರೆ ಗ್ರಾಮ ಸಮಿತಿ ಕಾರ್ಯದರ್ಶಿ ರಿಜ್ವಾನ್ ಕಾರ್ಯಕ್ರಮ ನಿರೂಪಿಸಿದರು.