ಮಾಂಡ್ ಸೋಭಾಣ್‌ನಿಂದ ಕಾರ್ಯಕ್ರಮ ನಿರೂಪಕರಿಗೆ ಕಾರ್ಯಾಗಾರ

Update: 2021-03-08 16:38 GMT

ಮಂಗಳೂರು, ಮಾ.8: ಮಾತೇ ಮಾಣಿಕ್ಯ. ಕೈಯಲ್ಲಿ ಮೈಕು ಹಿಡಿದಾಗ ಮಾತುಗಳನ್ನು ಮುತ್ತಿನ ಹಾಗೆ ಉಪಯೋಗಿಸಬೇಕು. ಇಂತಹ ತರಬೇತಿಗಳು ಇಂದಿನ ದಿನಮಾನದ ಅಗತ್ಯವಾಗಿದೆ. ಕಲಿಕೆಗೆ ಕೊನೆಯಿಲ್ಲ. ಕಲಿತಷ್ಟು ಹೊಸತನಕ್ಕೆ ತೆರೆದುಕೊಳ್ಳುವ ಅವಕಾಶಗಳು ದೊರೆಯುತ್ತವೆ. ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಿ ಎಂದು ಮಂಗಳೂರು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ರವಿಶಂಕರ್ ರಾವ್ ಹೇಳಿದರು.

ಮಾಂಡ್ ಸೊಭಾಣ್ ಸಂಸ್ಥೆಯ ಆಶ್ರಯದಲ್ಲಿ ಕಾರ್ಯಕ್ರಮ ನಿರೂಪಕರಿಗಾಗಿ ಮೂರು ದಿನಗಳ ಕಾಲ ನಡೆದ ಎಂ.ಸಿ. ತರಬೇತಿ ಸರ್ಟಿಫಿಕೇಟ್ ಕೋರ್ಸ್ ಅನ್ನು ಮೈಕನ್ನು ತೆಗೆದು ಗುಮಟೆಯಿಂದ ಮುತ್ತಿನ ಹರಳುಗಳನ್ನು ಬಿಡುಗಡೆಗೊಳಿಸುವ ಮೂಲಕ ವಿಶಿಷವಾಗಿ ಉದ್ಘಾಟಿಸಿ ಅವರು ಮಾತನಾಡಿದರು.

ತರಬೇತುದಾರರಾದ ಮಹೇಶ್ ನಾಯಕ್ ಮತ್ತು ವಿದ್ಯಾ ದಿನಕರ್ ಸಾರ್ವಜನಿಕ ಮಾತುಗಾರಿಕೆ ಮತ್ತು ವೇದಿಕೆ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಎರಿಕ್ ಒಝೇರಿಯೊ ಕಾರ್ಯ ನಿರ್ವಹಣೆಯ ಇತಿಹಾಸ ಮತ್ತು ಕೊಂಕಣಿ ಸಂಪ್ರದಾಯಗಳ ಬಗ್ಗೆ ಮಾಹಿತಿ ನೀಡಿದರು. ಉತ್ತಮ ಕಾರ್ಯಕ್ರಮ ನಿರೂಪಕರ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ ನಗರದ ಪ್ರಸಿದ್ಧ ಎಂ.ಸಿ. ಲೆಸ್ಲಿ ರೇಗೊ ಈ ಕ್ಷೇತ್ರದಲ್ಲಿ ತನ್ನ ಸಿಹಿಕಹಿ ಅನುಭವಗಳನ್ನು ಹಂಚಿಕೊಂಡರು.

ಸ್ಟ್ಯಾನಿ ಆಲ್ವಾರಿಸ್ (ಉತ್ತಮ ಕಾರ್ಯನಿರ್ವಾಹಕ ಏನು ಮಾಡಬೇಕು? ಏನು ಮಾಡಬಾರದು?), ವಿಕ್ಟರ್ ಮಥಾಯಸ್ (ಹಿಂದಿನ ಮದುವೆ ಸಂಭ್ರಮಗಳ ಬಗ್ಗೆ ಮತ್ತು ಈ ಕ್ಷೇತ್ರದ ತನ್ನ ಅನುಭವಗಳು), ಆಲ್ವಿನ್ ದಾಂತಿ ಪೆರ್ನಾಲ್ (ಇಂದಿನ ಸಂಭ್ರಮಗಳಲ್ಲಿ ನಡೆಯುವ ಕೆಟ್ಟ ಸಂಪ್ರದಾಯಗಳು) ಟೈಟಸ್ ನೊರೊನ್ಹಾ (ಸಂಗೀತ ರಸಮಂಜರಿ ನಿರ್ವಹಣೆ), ಎವ್ಲಿನ್ ಡಿಸೋಜ (ಸಾಮಾಜಿಕ ಕಾರ್ಯಕ್ರಮಗಳ ನಿರ್ವಹಣೆ), ಅರುಣ್ರಾಜ್ ರಾಡ್ರಿಗಸ್ (ಟಿವಿ ನಿರೂಪಣೆ), ಹೆರಾ ಪಿಂಟೊ (ಕಾರ್ಯಕ್ರಮಗಳ ಆಯೋಜನೆ) ಬಗ್ಗೆ ಮಾಹಿತಿ ನೀಡಿದರು.

ಶಿಬಿರಾರ್ಥಿಗಳ ತಂಡಗಳನ್ನು ರಚಿಸಿ, ಪ್ರಶ್ನೆಗಳನ್ನು ನೀಡಿ, ಸಂವಾದದ ಮುಖಾಂತರ ಅಭಿಪ್ರಾಯ ಕ್ರೋಢಿಕರಿಸಲಾಯಿತು. ಜಾಸ್ಮಿನ್ ಲೋಬೊ ಸಂಪನ್ಮೂಲ ವ್ಯಕ್ತಿಗಳನ್ನು ಸಭೆಗೆ ಪರಿಚಯಿಸಿದರು. ರಾಹುಲ್ ಪಿಂಟೊ ಮತ್ತು ರೆನೊಲ್ಡ್ ಲೋಬೊ ತಾಂತ್ರಿಕ ಸಹಕಾರ ನೀಡಿದರು.ದ.ಕ., ಉಡುಪಿ, ಉತ್ತರ ಕನ್ನಡ, ಹಾಸನ ಜಿಲ್ಲೆಗಳ 94 ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ, ಸದಸ್ಯರಾದ ನವೀನ್ ಲೋಬೊ, ಕಿಶೋರ್ ಫೆರ್ನಾಂಡಿಸ್, ಬನ್ನು ಫೆರ್ನಾಂಡಿಸ್, ಎಲ್ರೊನ್ ರಾಡ್ರಿಗಸ್, ರೊನಿ ಕ್ರಾಸ್ತಾ, ಸುನೀಲ್ ಮೊಂತೇರೊ, ಲವೀನಾ ದಾಂತಿ ಮತ್ತು ಕ್ಲಾರಾ ಡಿಕುನ್ಹಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News