ಸಮಾನತೆಯ ವೈಶಿಷ್ಟಪೂರ್ಣ ಬದಲಾವಣೆಗೆ ಅವಕಾಶ ಕಲ್ಪಿಸಿ : ಡಿಸಿ ಡಾ. ರಾಜೇಂದ್ರ

Update: 2021-03-08 17:25 GMT

ಮಂಗಳೂರು, ಮಾ.8: ಮಹಿಳೆಯರು ಕೇವಲ ಮನೆಕೆಲಸಕ್ಕೆ ಸೀಮಿತವಾಗದೆ ಉತ್ತಮ ಶಿಕ್ಷಣವಂತರಾಗಿ ಆರ್ಥಿಕವಾಗಿ ಸಬಲರಾಗುವುದರೊಂದಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿ ಸಮಾಜದ ವೈಶಿಷ್ಟಪೂರ್ಣ ಬದಲಾವಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಸಲಹೆ ನೀಡಿದ್ದಾರೆ.

ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನೆಹರು ಯುವಕೇಂದ್ರ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವುದು ಕಂಡುಬರುತ್ತಿದೆ. ಆದರೂ ಅವರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಮಾಡಿಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಗ್ರಾಮೀಣ ಮಹಿಳೆಯರ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಆಯಾ ತಾಲೂಕಿನ ಆರೋಗ್ಯ ಮತ್ತು ಕುಟುಂಬ ಇಲಾಖೆಗಳು ಅಗತ್ಯ ಮಾಹಿತಿಗಳನ್ನು ನೀಡಬೇಕು. ಜೊತೆಗೆ ಅರಿವು ಕಾರ್ಯಕ್ರಮಗಳು ಮತ್ತು ವಿಚಾರ ಸಂಕಿರಣ ಗಳನ್ನು ಕೈಗೊಂಡು ಮಹಿಳೆಯರಿಗೆ ಅಗತ್ಯವಿರುವ ಮೂಲಸೌಕರ್ಯವನ್ನು ಒದಗಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ಮಹಿಳೆಯರು ಹೆಚ್ಚಾಗಿ ತುತ್ತಾಗುತ್ತಿದ್ದು, ಕಾಯಿಲೆಗಳಿಗೆ ಸಂಬಂಧಿಸಿದ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಲು ಅರಿವು ಮೂಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆಗಳು ಮಾಡಬೇಕು ಎಂದು ಸೂಚನೆ ನೀಡಿದರು.

ಮಹಿಳೆಯರು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳ ಸಾಧ್ಯತೆ ಇರುತ್ತದೆ. ಇದನ್ನು ತಡೆಗಟ್ಟಲು ಜಿಲ್ಲಾ ದೂರು ಸಮಿತಿಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ದೇಶದಲ್ಲಿ ಮಹಿಳೆಯರು ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಜವಾಬ್ದಾರಿಯುತ ಕಾರ್ಯವನ್ನು ನಿರ್ವಹಿಸುತ್ತಿದ್ದು, ಪುರುಷ ರಿಗಿಂತ ಮಹಿಳೆಯರು ಸದೃಢರಾಗಿ ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡುವಂತಾಗಲಿ ಎಂದರು.

ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಕುಟುಂಬವೊಂದು ಗಟ್ಟಿಯಾಗಿ, ವ್ಯವಸ್ಥಿತವಾಗಿ ನೆಲೆಯೂರಬೇಕಾದರೆ ಮಹಿಳೆ ಬಹುಮುಖ್ಯ ಪಾತ್ರ ವಹಿಸುತ್ತಾಳೆ. ಮಹಿಳೆಯರು ಪ್ರತೀ ಕ್ಷೇತ್ರದಲ್ಲೂ ಸಾಧನೆ ಮಾಡುವುದರೊಂದಿಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಢರಾಗಬೇಕು ಎಂದರು.

ಸರಕಾರದ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಸಮಾಜದ ಸುಧಾರಣೆ ಮಾಡುವಲ್ಲಿ ಮಹಿಳೆಯ ಪಾತ್ರ ಅಪಾರವಾದದ್ದು. ಮಹಿಳೆಯರ ಶೋಷಣೆಯ ವಿರುದ್ಧ ಹೋರಾಡುವ ಮನೋಭಾವ ಪ್ರತಿಯೊಬ್ಬ ಮಹಿಳೆಯರಲ್ಲಿ ಬರ ಬೇಕು ಎಂದರು. ಜಿಪಂ ಸಿಇಒ ಡಾ.ಕುಮಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಜಿಪಂ ಸದಸ್ಯರಾದ ಮಮತಾ ಗಟ್ಟಿ, ಕಮಲಾಕ್ಷಿ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪಾ ಭೋವಿ, ನೆಹರು ಯುವ ಕೇಂದ್ರದ ಉಪ ನಿರ್ದೇಶಕ ರಘುವೀರ್ ಸೂಟರ್‌ಪೇಟೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News