ಉತ್ತರಾಖಂಡ ಬಿಜೆಪಿ ಸಿಎಂ ಪದಚ್ಯುತಿ ಸಂಭವ
ಹೊಸದಿಲ್ಲಿ, ಮಾ.9: ತಮ್ಮದೇ ಪಕ್ಷದ ಶಾಸಕರು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕಾರ್ಯವೈಖರಿಯನ್ನು 'ಕಳಪೆ' ಎಂದು ಹೈಕಮಾಂಡ್‌ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕೇಂದ್ರ ನಾಯಕತ್ವ ಮುಂದಾಗಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಈ ಮಧ್ಯೆ ರಾವತ್ ದಿಲ್ಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಹಾಗೂ ಸತ್ಪಾಲ್ ಮಹಾರಾಜ್ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಕೇಳಿಬರುತ್ತಿದೆ. ರಾವತ್ ಅವರ ಪದಚ್ಯುತಿ ಸಾಧ್ಯತೆಯನ್ನು ಬಿಜೆಪಿ ಮೂಲಗಳು ದೃಢಪಡಿಸಿವೆ ಎನ್ನಲಾಗುತ್ತಿದೆ. ಆದರೆ ಈ ನಡುವೆ "ಅಂತಹ ಯಾವುದೇ ನಡೆ ಇಲ್ಲ" ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬನ್ಷಿದಾರ್ ಭಗತ್ ಹೇಳಿದ್ದಾರೆ.
ಸೋಮವಾರ ಸಂಜೆ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ರಾವತ್ ಭೇಟಿ ಮಾಡಿದರು. ಇದಕ್ಕೂ ಮುನ್ನ ನಡ್ಡಾ, ಗೃಹಸಚಿವ ಅಮಿತ್ ಶಾ ಹಾಗೂ ಬಿಜೆಪಿ ಸಂಘಟನೆ ಜವಾಬ್ದಾರಿ ಹೊತ್ತಿರುವ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಜತೆ ಪರಿಸ್ಥಿತಿ ಬಗ್ಗೆ ಚರ್ಚಿಸಿದರು.
ರಾವತ್ ಮಂಗಳವಾರ ಡೆಹ್ರಾಡೂನ್‌ಗೆ ತೆರಳಲಿದ್ದು, ಮಂಗಳವಾರ ಸಂಜೆ ತಮ್ಮ ನಿವಾಸದಲ್ಲಿ ಬಿಜೆಪಿ ಶಾಸಕಾಂಗ ಮಂಡಳಿ, ಮೇಯರ್ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸಭೆ ಕರೆದಿದ್ದಾರೆ. ಸಿಎಂ ಈ ಸಭೆಯಲ್ಲಿ ಪಕ್ಷದ ಶಾಸಕರ ಬೆಂಬಲ ಯಾಚಿಸಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ, ರಮಣ್ ಸಿಂಗ್ ಹಾಗೂ ದುಷ್ಯಂತ್ ಗೌತಮ್ ಹೀಗೆ ಪಕ್ಷದ ಇಬ್ಬರು ಕೇಂದ್ರೀಯ ವೀಕ್ಷಕರನ್ನು ಡೆಹ್ರಾಡೂನ್‌ಗೆ ಕಳುಹಿಸಲಾಗಿತ್ತು. ಈ ವೇಳೆ ಸಿಎಂ ವಿರುದ್ಧ ಶಾಸಕರು ದೂರು ನೀಡಿದ್ದಾರೆ. ಶಾಸಕರು, ಸಚಿವರು, ಸಿಎಂ ಹಾಗೂ ಆರೆಸ್ಸೆಸ್ ಮುಖಂಡರನ್ನು ಭೇಟಿ ಮಾಡಿದ ವೀಕ್ಷಕರು ಪಕ್ಷಾಧ್ಯಕ್ಷರಿಗೆ ವರದಿ ಸಲ್ಲಿಸಿದ್ದರು.