ಪತ್ನಿ ಚುನಾವಣಾ ಕಣಕ್ಕೆ: ಪತಿ ಎಸ್ಪಿಗೆ ಗೇಟ್‌ಪಾಸ್
ಕೊಲ್ಕತ್ತಾ, ಮಾ.9: ಹೌರಾ ಗ್ರಾಮೀಣ ಜಿಲ್ಲಾ ಪೊಲೀಸ್ ಅಧೀಕ್ಷಕ ಹುದ್ದೆಯಿಂದ ಸೌಮ್ಯಾ ರಾಯ್ ಅವರನ್ನು ತೆರವುಗೊಳಿಸಿ ಭಾರತದ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಅವರ ಪತ್ನಿ ಲವ್ಲಿ ಮೈತ್ರಾ ಚುನಾವಣಾ ಕಣಕ್ಕೆ ಧುಮುಕಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಲವ್ಲಿ ಮೈತ್ರಾ ದಕ್ಷಿಣ 24 ಪರಗಣಾ ಜಿಲ್ಲೆಯ ಸೋನಾಪುರ ದಕ್ಷಿಣ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚುನಾವಣಾ ನಿಯಮಾವಳಿ ಪ್ರಕಾರ, ಅಭ್ಯರ್ಥಿಯ ಕುಟುಂಬ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಹೇಳಿದೆ.
"ಸೌಮ್ಯಾ ರಾಯ್ ಅವರನ್ನು ವಜಾ ಮಾಡಲಾಗಿದೆ. ಅವರ ಪತ್ನಿ ಲವ್ಲಿ ಮೈತ್ರಾ ಅಭ್ಯರ್ಥಿಯಾಗಿದ್ದು, ಸೌಮ್ಯಾ ರಾಯ್ ಯಾವುದೇ ರೀತಿಯಲ್ಲಿ ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳುವಂತಿಲ್ಲ" ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಟಿಎಂಸಿ ಅಭ್ಯರ್ಥಿಯಾಗಿ ಸೋನಾಪುರ ದಕ್ಷಿಣ ಕ್ಷೇತ್ರಕ್ಕೆ ಲವ್ಲಿ ಮೈತ್ರಾ ಹೆಸರನ್ನು ಟಿಎಂಸಿ ಘೋಷಿಸಿದ ಬೆನ್ನಲ್ಲೇ, ಅವರ ಪತಿ ಗ್ರಾಮೀಣ ಹೌರಾ ಎಸ್ಪಿಯಾಗಿ ಹೇಗೆ ಮುಂದುವರಿಯುತ್ತಾರೆ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳು ಎತ್ತಿದ್ದವು.