×
Ad

ಗೋರಖಪುರ್ ಮುಬಾರಕ್ ಖಾನ್ ಶಹೀದ್ ದರ್ಗಾ ನೆಲಸಮಕ್ಕೆ ಸುಪ್ರೀಂ ತಡೆಯಾಜ್ಞೆ

Update: 2021-03-09 12:21 IST
photo: amar ujala

ಗೋರಖಪುರ್:  ಉತ್ತರ ಪ್ರದೇಶದ ಗೋರಖಪುರ್ ನಲ್ಲಿರುವ ದರ್ಗಾ ಮುಬಾರಕ್  ಖಾನ್ ಶಹೀದ್‍ನ ಯಾವುದೇ ಕಟ್ಟಡವನ್ನು ಇನ್ನು ಮುಂದಕ್ಕೆ ನೆಲಸಮಗೊಳಿಸುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ವಿಧಿಸಿದೆ. ಉತ್ತರ ಪ್ರದೇಶದ ಸಾರ್ವಜನಿಕ ಸ್ಥಳಗಳ (ಅಕ್ರಮ ವಾಸ ತೆರವು) ಕಾಯಿದೆ, 1972 ಅನ್ವಯ ಬಾಕಿಯಿರುವ ವಿಚಾರಣೆ  ಮುಗಿಯುವ ತನಕ  ಕಟ್ಟಡ ನೆಲಸಮ ತಡೆಯಾಜ್ಞೆ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.

ಜಸ್ಟಿಸ್ ನವೀನ್ ಶಾ ಹಾಗೂ ಜಸ್ಟಿಸ್ ಕೃಷ್ಣ ಮುರಾರಿ ಅವರನ್ನೊಳಗೊಂಡ ವಿಭಾಗೀಯ ಪೀಠ ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್ ಕೂಡ ಜಾರಿಗೊಳಿಸಿದೆ.

ದರ್ಗಾ ಕಟ್ಟಡ ನೆಲಸಮದ ಕ್ರಮವು ಅಕ್ರಮ ಹಾಗೂ ನೆಲಸಮ ಕಾರ್ಯಕ್ಕೆ ತಡೆ ಹೇರುವಂತೆ ಕೋರಿ ವಕೀಲರಾದ ಶಾರಿಖ್ ಅಹ್ಮದ್ ಎನ್ನುವವರು ಈ ಹಿಂದೆ ಸಲ್ಲಿಸಿದ್ದ ಅಪೀಲನ್ನು ಅಲಹಾಬಾದ್ ಹೈಕೋರ್ಟ್ ತನ್ನ  ಫೆಬ್ರವರಿ 10, 2021ರ ತೀರ್ಪಿನಲ್ಲಿ ರದ್ದುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಮಾರ್ಚ್ 9ರಂದು ನೆಲಸಮ ಕಾರ್ಯ ಆರಂಭಿಸುವಂತೆ  ಹಾಗೂ ಅದಕ್ಕಾಗಿ ಪೊಲೀಸ್ ರಕ್ಷಣೆ  ಒದಗಿಸುವಂತೆ  ಗೋರಖಪುರ್ ಎಸ್‍ಪಿ ಅವರಿಗೆ ಸೂಚಿಸಿ  ಗೋರಖಪುರ್ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಬರೆದ  ಪತ್ರದ ಕುರಿತು ತಮಗೆ ಮಾಹಿತಿ ದೊರಕಿದೆ ಎಂದು ಅಫೀಲುದಾರರ ಪರ ವಕೀಲರು ನ್ಯಾಯಾಲಯಕ್ಕೆ ಸೋಮವಾರ ತಿಳಿಸಿದ್ದರು.

ಸಂಬಂಧಿತ ಈದ್ಗಾದಲ್ಲಿ ಸಂತ ಮುಬಾರಕ್ ಖಾನ್ ಶಹೀದ್ ಅವರ ಸಮಾಧಿ ಹಾಗೂ  ಅದರ ದಕ್ಷಿಣ ದಿಕ್ಕಿನಲ್ಲಿ ಮಸೀದಿಯಿದೆ ಹಾಗೂ ಇಲ್ಲಿ ಮುಸ್ಲಿಂ ಸಮುದಾಯ ಬಹಳ ಪ್ರಾಚೀನ ಕಾಲದಿಂದಲೂ ಪ್ರಾರ್ಥನೆ ಸಲ್ಲಿಸುತ್ತಿದೆ ಎಂದು ಅಪೀಲಿನಲ್ಲಿ ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News