ಬ್ರಿಟಿಷ್ ಸಂಸತ್ತಿನಲ್ಲಿ ರೈತ ಪ್ರತಿಭಟನೆ ಕುರಿತ ಚರ್ಚೆಯನ್ನು ಖಂಡಿಸಿದ ಭಾರತ

Update: 2021-03-09 17:21 GMT

ಹೊಸದಿಲ್ಲಿ,ಮಾ.9: ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯ ನಡುವೆಯೇ ಶಾಂತಿಯುತ ಪ್ರತಿಭಟನೆಗಳು ಮತ್ತು ಭಾರತದಲ್ಲಿ ಪತ್ರಿಕಾ ಸ್ವಾತಂತ್ರ ಕುರಿತು ಬ್ರಿಟಿಷ್ ಸಂಸದರ ಗುಂಪೊಂದು ಸೋಮವಾರ ನಡೆಸಿದ,ಸ್ಪಷ್ಟವಾಗಿ ಏಕಪಕ್ಷೀಯವಾಗಿದ್ದ ಚರ್ಚೆಗಳಲ್ಲಿ ವ್ಯಕ್ತವಾಗಿದ್ದ ಸುಳ್ಳು ಪ್ರತಿಪಾದನೆಗಳನ್ನು ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಖಂಡಿಸಿದೆ.

ಭಾರತದಲ್ಲಿ ರೈತರ ಪ್ರತಿಭಟನೆಗಳ ಸುತ್ತಲಿನ ಘಟನಾವಳಿಗಳಿಗೆ ಬ್ರಿಟಿಷ್ ಮಾಧ್ಯಮಗಳು ಸೇರಿದಂತೆ ವಿದೇಶಿ ಮಾಧ್ಯಮಗಳು ಸ್ಥಳದಲ್ಲಿ ಖುದ್ದಾಗಿ ಉಪಸ್ಥಿತವಿದ್ದು ಸಾಕ್ಷಿಯಾಗಿದ್ದವು,ಹೀಗಾಗಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರದ ಕೊರತೆಯ ಪ್ರಶ್ನೆಯೇ ಏಳುವುದಿಲ್ಲ ಎಂದು ಹೇಳಿಕೆಯಲ್ಲಿ ಬೆಟ್ಟು ಮಾಡಿರುವ ರಾಯಭಾರ ಕಚೇರಿಯು,ಸಮತೋಲಿತ ಚರ್ಚೆಗಳನ್ನು ನಡೆಸುವ ಬದಲು ಯಾವುದೇ ಸಮರ್ಥನೆಗಳಿಲ್ಲದ ಸುಳ್ಳು ಪ್ರತಿಪಾದನೆಗಳನ್ನು ಮಾಡಲಾಗಿದೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ವಿರುದ್ಧ ದೋಷಾರೋಪಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದೆ.

ಬ್ರಿಟಿಷ್ ಸಂಸತ್ತಿನ ವೆಬ್‌ಸೈಟ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಸಹಿಗಳೊಂದಿಗಿನ ಇ-ಅಹವಾಲಿನ ಹಿನ್ನೆಲೆಯಲ್ಲಿ ಸುಮಾರು ಒಂದು ಡಝನ್ ಸಂಸದರು ಪಕ್ಷಭೇದವನ್ನು ಮರೆತು ಒಟ್ಟು ಸೇರಿ ಭಾರತದಲ್ಲಿ ಪ್ರತಿಭಟನಾನಿರತ ರೈತರ ವಿರುದ್ಧ ಬಲಪ್ರಯೋಗ ಮತ್ತು ಪ್ರತಿಭಟನೆಗಳ ವರದಿ ಮಾಡುವ ಪತ್ರಕರ್ತರನ್ನು ಗುರಿಯಾಗಿಸಿಕೊಳ್ಳುತ್ತಿರುವ ಬಗ್ಗೆ ಚರ್ಚೆಗಳನ್ನು ನಡೆಸಿತ್ತು.

ಸೀಮಿತ ಕೋರಮ್‌ನಲ್ಲಿ ಸಂಸದರ ಸಣ್ಣ ಗುಂಪೊಂದು ಭಾಗಿಯಾಗಿದ್ದ ಆಂತರಿಕ ಚರ್ಚೆಯ ಬಗ್ಗೆ ಮಾತನಾಡುವುದರಿಂದ ತಾನು ಸಾಮಾನ್ಯವಾಗಿ ದೂರ ಉಳಿಯುತ್ತೇನಾದರೂ ಯಾರಾದರೂ ಭಾರತದ ವಿರುದ್ಧ ದೋಷಾರೋಪಣೆ ಮಾಡಿದಾಗ ಭಾರತದೊಂದಿಗೆ ತಮ್ಮ ಗೆಳೆತನ,ಅದರ ಮೇಲೆ ತಮ್ಮ ಪ್ರೀತಿ ಅಥವಾ ತಮ್ಮ ಆಂತರಿಕ ರಾಜಕೀಯ ಅನಿವಾರ್ಯತೆಗಳ ಬಗ್ಗೆ ಅವರ ಹೇಳಿಕೆಗಳು ಏನೇ ಇದ್ದರೂ ತಪ್ಪು ಗ್ರಹಿಕೆಯನ್ನು ನಿವಾರಿಸುವ ಅಗತ್ಯವಿದೆ ಎಂದಿರುವ ಹೇಳಿಕೆಯು,ರಾಯಭಾರ ಕಚೇರಿಯು ಅಹವಾಲಿನಲ್ಲಿ ಎತ್ತಲಾಗಿರುವ ವಿಷಯಗಳ ಬಗ್ಗೆ ಸಂಬಂಧಪಟ್ಟವರಿಗೆ ಆಗಾಗ್ಗೆ ಮಾಹಿತಿ ನೀಡಲು ಕಾಳಜಿಯನ್ನು ವಹಿಸುತ್ತಿದ್ದರೂ ರೈತರ ಪ್ರತಿಭನೆಯ ಕುರಿತು ಸುಳ್ಳು ಪ್ರತಿಪಾದನೆಗಳನ್ನು ಮಾಡಲಾಗಿದೆ ಎಂದು ತಿಳಿಸಿದೆ.

  ಪ್ರಧಾನಿ ಬೋರಿಸ್ ಜಾನ್ಸನ್ ಅವರ ಮುಂಬರುವ ಭಾರತ ಭೇಟಿ ಸಂದರ್ಭವನ್ನು ಅಗತ್ಯವಾದರೆ ‘ಗಂಭೀರ ಮತ್ತು ನಿರ್ದಿಷ್ಟ’ ವಿಷಯಗಳನ್ನೆತ್ತಲು ಬಳಸಿಕೊಳ್ಳಲಾಗುವುದು ಎಂದು ಬ್ರಿಟಿಷ್ ಸರಕಾರವು ಸೋಮವಾರ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News