×
Ad

ಮಂಗಳೂರು: ಇಂಧನ ತೈಲ ಬೆಲೆಯೇರಿಕೆ ವಿರುದ್ಧ ಆನ್ಲೈನ್ ಟ್ಯಾಕ್ಸಿ ಚಾಲಕರಿಂದ ನೇಣು ಹಗ್ಗ ಪ್ರದರ್ಶಿಸಿ ಪ್ರತಿಭಟನೆ

Update: 2021-03-09 13:08 IST

ಮಂಗಳೂರು, ಮಾ.9: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ, ದ.ಕ. ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘದ ನೇತೃತ್ವದಲ್ಲಿಂದು ನೇಣು ಹಗ್ಗ ಪ್ರದರ್ಶಿಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು.

ಮಂಗಳೂರಿನ ಮಿನಿ ವಿಧಾನ ಸೌಧದ ಬಳಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಓಲಾ, ಉಬರ್ ಟ್ಯಾಕ್ಸಿ ಚಾಲಕರಿಗೆ ಸರಕಾರ ನಿಗದಿಪಡಿಸಿರುವ ದರ ನೀಡುವಂತೆ ಒತ್ತಾಯಿಸಲಾಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಕೇಂದ್ರ ಮತ್ತು ರಾಜ್ಯ ಸರಕಾರಗಳು  ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತೆರಿಗೆಯ ಮೇಲೆ ತೆರಿಗೆಯ ಹಾಕಿ ಜನ ಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ. ಕೋವಿಡ್ ಸಂಕಷ್ಟದಲ್ಲಿರುವ ಚಾಲಕರಿಗೆ ತೈಲ ಬೆಲೆ ಏರಿಕೆಯು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಆನ್ಲೈನ್  ವಾಹನ ಚಾಲಕರ ದುಡಿಮೆ ಪೆಟ್ರೋಲ್, ಡಿಸೇಲ್ ಖರೀದಿಗೆ ಸಾಕಾಗುತ್ತಿಲ್ಲ. ಕಾರಿನ ಸಾಲದ ಕಂತು ಕಟ್ಟಲಾಗದೆ ಕಾರುಗಳನ್ನು ಹಣಕಾಸು ಸಂಸ್ಥೆಗಳು ವಶಕ್ಕೆ ಪಡೆಯುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಚಾಲಕರು ಸಾಮೂಹಿಕ ಆತ್ಮಹತ್ಯೆ ದಾರಿ ಹಿಡಿಯಬಹುದು ಎಂಬ ಆತಂಕ ವ್ಯಕ್ತಪಡಿಸಿದ ಅವರು, ಜಿಲ್ಲಾಧಿಕಾರಿ ಕೂಡಲೇ ಆನ್ಲೈನ್ ರೇಡಿಯೋ ಟ್ಯಾಕ್ಸಿ ಕಂಪೆನಿಯವರನ್ನು ಕರೆಸಿ ಒನ್ಲೈನ್ ಟ್ಯಾಕ್ಸಿಗೂ ಸರಕಾರ ನಿಗದಿ ಪಡಿಸಿದ ದರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎನ್.ರವೀಂದ್ರ ಕಾವೂರು, ಮುಖಂಡರಾದ ರಾಕೇಶ್, ಕರುಣಾಕರ, ಕಲೀಮ್ ಮದನಿ, ವೈ.ಶಿವ, ರಶೀದ್, ಮುಸ್ತಫಾ, ಅಲ್ತಾಫ್ ಉಳ್ಳಾಲ ಮುಂತಾದವರು ಭಾಗವಹಿಸಿದ್ದರು.

ಮುಖಂಡರಾದ ಸಾದಿಕ್ ಕಣ್ಣೂರ್ ಸ್ವಾಗತಿಸಿದರು. ನೌಶಾದ್ ಕಾವೂರು ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News